
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ರವರ ಗೋವಾದ ಸಹಕಾರಿ ಸಂಸ್ಥೆಯ ಹೆಸರಿನಲ್ಲಿ ದಾಖಲಾಗಿದ್ದ ಸುಮಾರು ₹21 ಕೋಟಿ ಮೌಲ್ಯದ ಆಸ್ತಿಗಳನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಕ್ರಮದೊಂದಿಗೆ ಗೋವಾದಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡಿದ ಪ್ರಕರಣದಲ್ಲಿ ಶಾಸಕ ಸೈಲ್ ಅವರಿಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಜಪ್ತಿ ಮಾಡಿದ ಆಸ್ತಿಗಳ ವಿವರ:
ಇಡಿ ಅಧಿಕಾರಿಗಳು ಗೋವಾ ವಾಸ್ಕೊ ಮುರಗಾಂವ ತಾಲೂಕಿನ ಚಿಕಲಿಯ ಪ್ರದೇಶದಲ್ಲಿರುವ 12,500 ಚ.ಮೀ. ಜಾಗ, ಪೆದ್ರೋ ಗಲ್ಲೆ ಕೊಟ್ಟಾ ಅವರ ಹೆಸರಿನಲ್ಲಿದ್ದ 16,850 ಚ.ಮೀ. ಜಾಗ ಹಾಗೂ ವಾಸ್ಕೊ ಕದಂಬ ಬಸ್ ನಿಲ್ದಾಣದ ಬಳಿ ಇರುವ ಅವರ್ ಲೇಡಿ ಆಫ್ ಮರ್ಸಿಸ್ ಕಟ್ಟಡದ ಮೊದಲ ಮಹಡಿಯಿಂದ ಐದನೇ ಮಹಡಿವರೆಗೆ ವ್ಯಾಪಿಸಿರುವ ವಾಣಿಜ್ಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಆಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಸುಮಾರು ₹64 ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸತೀಶ್ ಸೈಲ್ ಅವರು “ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯ ಮೂಲಕ ಅಗತ್ಯ ಪರವಾನಗಿಯಿಲ್ಲದೆ ಗೋವಾದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
2010ರ ಮಾರ್ಚ್ 15ರಂದು ಕರ್ನಾಟಕದ ಬೇಲಿಕೇರಿ ಬಂದರಿನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ದೊಡ್ಡ ಪ್ರಮಾಣದ ಕಬ್ಬಿಣದ ಅದಿರು ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ಅದಾದ ನಂತರ ಇಡಿ ಅಧಿಕಾರಿಗಳು ಕರ್ನಾಟಕ, ಗೋವಾ, ದೆಹಲಿ ಮತ್ತು ಮುಂಬೈ ಸೇರಿ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ಸತೀಶ್ ಸೈಲ್ ಅವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು ₹8 ಕೋಟಿ ನಗದು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದರು.
ಇತ್ತೀಚೆಗೆ, ವೈದ್ಯಕೀಯ ಕಾರಣಗಳಿಂದ ಸೈಲ್ ಅವರಿಗೆ ನೀಡಲಾಗಿದ್ದ ತಾತ್ಕಾಲಿಕ ಜಾಮೀನು ನವೆಂಬರ್ 7ರಂದು ರದ್ದುಗೊಂಡಿರುವುದಾಗಿ ಮೂಲಗಳು ತಿಳಿಸಿವೆ.


