ಮೈಸೂರು: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರ ಕರಾಳ ಗತಕಾಲದ ಮತ್ತೊಂದು ಗಂಭೀರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯುವಕರ ಮೇಲೆ ಅಧಿಕಾರ ಚಲಾಯಿಸಿ ಸದ್ದು ಮಾಡಿದ್ದ ಈ ಅಧಿಕಾರಿಯ ವಿರುದ್ಧ 2014ರಲ್ಲೇ ದೆಹಲಿ ಮೂಲದ ಮಾಡೆಲ್ ಒಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, 2014ರಲ್ಲಿ ಧನಂಜಯ್ ಅವರು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಪ್ರಕರಣವೊಂದರ ತನಿಖೆಯ ಸಂಬಂಧ ಅವರಿಗೆ ದೆಹಲಿ ಮೂಲದ ಮಾಡೆಲ್ ಒಬ್ಬರ ಪರಿಚಯವಾಗಿತ್ತು. ಈ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿ, ಮಾಡೆಲ್ ಜೊತೆ ಸಂಬಂಧ ಬೆಳೆಸಿದ್ದ ಧನಂಜಯ್, ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತ ಮಾಡೆಲ್ ದೆಹಲಿ ನ್ಯಾಯಾಲಯದಲ್ಲಿ ಧನಂಜಯ್ ವಿರುದ್ಧ ಖಾಸಗಿ ದೂರು (PCR) ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಆರೋಪಿ ಪಿಎಸ್‌ಐ ಧನಂಜಯ್‌ರನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾಗ, ಅವರು ಬಂಧನದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು ಎಂಬ ವಿಚಾರ ಇದೀಗ ತನಿಖೆಯಿಂದ ತಿಳಿದುಬಂದಿದೆ. ಗಣೇಶೋತ್ಸವದ ವಿಚಾರದಲ್ಲಿ ಯುವಕರಿಗೆ ಬೆದರಿಕೆ ಹಾಕಿದ ಬೆನ್ನಲ್ಲೇ ಈ ಹಳೆ ಅತ್ಯಾಚಾರ ಪ್ರಕರಣ ಮುಂಚೂಣಿಗೆ ಬಂದಿದ್ದು, ಧನಂಜಯ್ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.


