ಮಂಗಳೂರು: ಇನ್‌ಸ್ಟಾಗ್ರಾಂ ಸ್ನೇಹ, ಫೋಟೋ ಮಾರ್ಫಿಂಗ್ ಮಾಡಿ ಯುವಕನಿಗೆ ಬೆದರಿಸಿ 5.24 ಲಕ್ಷ ದೋಚಿದ ಖದೀಮ

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಖದೀಮನೊಬ್ಬ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫಿಂಗ್ ಮಾಡಿ, ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗೆ ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಬೆದರಿದ 19 ವರ್ಷದ ಸಂತ್ರಸ್ತ ಯುವಕ ಹಂತ ಹಂತವಾಗಿ ಬರೋಬ್ಬರಿ 5,24,712 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸಂತ್ರಸ್ತ ಯುವಕ ಇನ್‌ಸ್ಟಾಗ್ರಾಂ ಬಳಸುತ್ತಿದ್ದ ವೇಳೆ ಜಮ್‌ಶೇದ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕಮೆಂಟ್ ಬಾಕ್ಸ್‌ನಲ್ಲಿ ‘+919728550836’ ಎಂಬ ಮೊಬೈಲ್ ಸಂಖ್ಯೆ ನೀಡಿ ವಾಟ್ಸಾಪ್‌ನಲ್ಲಿ ಚಾಟ್ ಮಾಡುವಂತೆ ಕೋರಿದ್ದ. ಜೂನ್ 19, 2026 ರಿಂದ ವಾಟ್ಸಾಪ್ ಚಾಟ್ ಆರಂಭಿಸಿದ ಆ ಖದೀಮ, ಮೊದಲು 300 ರೂಪಾಯಿ ಹಣ ನೀಡುವಂತೆ ಕೇಳಿದ್ದಾನೆ. ಯುವಕ ನಿರಾಕರಿಸಿದರೂ ಪದೇಪದೇ ಕರೆ ಮಾಡಿ ಬೇಡಿಕೊಂಡಾಗ ಯುವಕ ಕರುಣೆಯಿಂದ 300 ರೂ. ಫೋನ್ ಪೇ ಮಾಡಿದ್ದರು.

ಅದಾದ ಬಳಿಕ ಆರೋಪಿಯು ಬೇರೆ ಬೇರೆ ವಾಟ್ಸಾಪ್ ಸಂಖ್ಯೆಗಳಿಂದ (+918290653224, +919671689249 ಹಾಗೂ +919121411726) ಕರೆ ಮಾಡಿ ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಯುವಕ ಸ್ಪಷ್ಟವಾಗಿ ಹಣ ನೀಡಲು ನಿರಾಕರಿಸಿದಾಗ, ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಎಡಿಟ್ (Morph) ಮಾಡಿ ವಾಟ್ಸಾಪ್‌ಗೆ ಕಳುಹಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಈ ಎಡಿಟೆಡ್ ಅಶ್ಲೀಲ ಫೋಟೋವನ್ನು ನಿನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಫಾಲೋವರ್ಸ್‌ಗೆ ಕಳುಹಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮಾನಹಾನಿಯ ಭಯಕ್ಕೆ ಬಿದ್ದ ಯುವಕ, ಕರಗತನದಿಂದ ಪಾರಾಗಲು ಆರೋಪಿ ಕಳುಹಿಸಿದ ವಿವಿಧ ಸ್ಕ್ಯಾನರ್‌ಗಳಿಗೆ ಜೂನ್ 19 ರಿಂದ ಜುಲೈ 23, 2026 ರವರೆಗೆ ತಮ್ಮ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಫೋನ್ ಪೇ ಮೂಲಕ ಹಂತ ಹಂತವಾಗಿ ಒಟ್ಟು 5,24,712 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಸರಣಿ ಬ್ಲ್ಯಾಕ್‌ಮೇಲ್‌ನಿಂದ ಕಂಗಾಲಾದ ಯುವಕ ಕೊನೆಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ಕ್ರೈಮ್ (CEN) ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಣ ಪಡೆದ ಯುಪಿಐ ಐಡಿ ಹಾಗೂ ಬ್ಯಾಂಕ್ ಖಾತೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *