ಕಾಪು: ದೇವಸ್ಥಾನದ ಚಿಲಕ ಮುರಿದು ಬೆಳ್ಳಿ ಮುಖವಾಡ, ಕಾಣಿಕೆ ಡಬ್ಬಿಯ ಹಣ ಕಳವು

ಕಾಪು : ಬೆಳಪು ಗ್ರಾಮದ ಶ್ರದ್ಧಾಕೇಂದ್ರವಾಗಿರುವ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನದಲ್ಲಿ ಕಳ್ಳರು ಬಾಗಿಲಿನ ಚಿಲಕ ಮುರಿದು ದೇವರ ಬೆಳ್ಳಿಯ ಮುಖವಾಡ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ದೋಚಿರುವ ಘಟನೆ ಸಂಭವಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ (50) ಅವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 24ರಂದು ಸಂಜೆ 6:30ಕ್ಕೆ ಅರ್ಚಕರು ದೇವಸ್ಥಾನದ ಬಾಗಿಲನ್ನು ಬೀಗ ಹಾಕಿ ಭದ್ರಪಡಿಸಿ ತೆರಳಿದ್ದರು. ಮರುದಿನ, ಆಗಸ್ಟ್ 25ರಂದು ಬೆಳಿಗ್ಗೆ 7:30ರ ಸುಮಾರಿಗೆ ಸ್ಥಳೀಯರಾದ ಗಣೇಶ್ ದೇವಾಡಿಗ ಎಂಬುವರು ದೇವಸ್ಥಾನದ ಎದುರಿನ ಬಾಗಿಲು ಅರ್ಧ ತೆರೆದಿರುವುದನ್ನು ಗಮನಿಸಿ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅಪರಿಚಿತ ಕಳ್ಳರು ದೇವಸ್ಥಾನದ ಮುಂಭಾಗದ ಬಾಗಿಲಿನ ಚಿಲಕವನ್ನು ಮುರಿದು ಒಳಪ್ರವೇಶಿಸಿ, ಬಳಿಕ ಗರ್ಭಗುಡಿಯ ಬಾಗಿಲ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ.

ಗರ್ಭಗುಡಿಯಲ್ಲಿದ್ದ ಎರಡು ದೇವರ ಮೂರ್ತಿಗಳಿಗೆ ತೊಡಿಸಲಾಗಿದ್ದ ಅಂದಾಜು ₹1,30,000 ಮೌಲ್ಯದ ಬೆಳ್ಳಿಯ ಮುಖವಾಡಗಳನ್ನು ಕಳ್ಳರು ಎಗರಿಸಿದ್ದಾರೆ. ಅಷ್ಟೇ ಅಲ್ಲದೆ, ದೇವಸ್ಥಾನದ ಒಳಗಿನ ಪ್ರಾಂಗಣದಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿಯ (ಹುಂಡಿ) ಬೀಗವನ್ನು ಮುರಿದು ಅದರಲ್ಲಿದ್ದ ಅಪಾರ ಪ್ರಮಾಣದ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 73/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305 ಹಾಗೂ 331 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *