ಶಾಸಕ ಸುನಿಲ್ ಕುಮಾರ್ ವಿರುದ್ಧ ಪ್ರಚೋದನಕಾರಿ ವಿಡಿಯೋ; ಪ್ರಸಾದ್ ಶೆಟ್ಟಿ ಬಂಧನ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರ ತಲೆಯನ್ನು ಕತ್ತರಿಸಿದ ರೀತಿಯಲ್ಲಿ ಚಿತ್ರವನ್ನು ಎಡಿಟ್ ಮಾಡಿ, ಪ್ರಚೋದನಕಾರಿ ಹಿನ್ನೆಲೆ ಧ್ವನಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಮೂಲದ ವಿಘೇಶ್ ಪ್ರಸಾದ್ ರಾವ್ ಎಂಬುವರು ಸೆಪ್ಟೆಂಬರ್ 12ರಂದು ರಾತ್ರಿ ಫೇಸ್‌ಬುಕ್ ಬಳಸುತ್ತಿದ್ದಾಗ ‘Prasad Shetty’ ಎಂಬ ಖಾತೆಯಲ್ಲಿ ಶಾಸಕರ ಚಿತ್ರವನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಿರುವುದು ಗಮನಕ್ಕೆ ಬಂದಿದೆ. ಸದರಿ ವಿಡಿಯೋದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವುದಲ್ಲದೆ, ಜನಪ್ರತಿನಿಧಿಯೊಬ್ಬರನ್ನು ಕೊಲೆ ಮಾಡಬೇಕು ಹಾಗೂ ಹಲ್ಲೆ ನಡೆಸಬೇಕು ಎಂಬ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವಂತಹ ಆಡಿಯೋ ತುಣುಕನ್ನು ಎಡಿಟ್ ಮಾಡಿ ಪ್ರಕಟಿಸಲಾಗಿತ್ತು.

ಜನರಿಂದ ಆಯ್ಕೆಯಾದ ಶಾಸಕರ ವಿರುದ್ಧ ಇಂತಹ ದ್ವೇಷಪೂರಿತ ವಿಡಿಯೋ ಹರಿಬಿಡುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂದು ವಿಘೇಶ್ ಪ್ರಸಾದ್ ರಾವ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪ್ರಸಾದ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮುಂದಿನ ಕಾನೂನು ನಡಾವಳಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Star Of Kudla

Learn More →

Leave a Reply

Your email address will not be published. Required fields are marked *