
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿದ್ದು, ಇಂದು ಅಪಾಯಕಾರಿ ಮಟ್ಟದಲ್ಲಿ ದಾಖಲಾಗಿದೆ. ಇಂದು ಮಂಜಾನೆ 7.15ರ ಸುಮಾರಿಗೆ ದೆಹಲಿಯಲ್ಲಿ ವಾಯು ಸೂಚ್ಯಂಕ ಗುಣಮಟ್ಟ(AQI) 655 ಇದ್ದು, ಇದು ಅತ್ಯಂದ ಕಳಪೆ ಎಂದು ದಾಖಲಾಗಿದೆ. ಉಳಿದ ಇತರೆ ದಿನಗಳನ್ನೂ ಕೂಡ ವಾಯುಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲಿ ಮುಂದುವರೆದಿದೆ.
ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿತ ಕಂಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ರೇಖಾ ಗುಪ್ತಾ ಶುಕ್ರವಾರ ದೆಹಲಿ ಸರ್ಕಾರಿ ಮತ್ತು ಎಂಸಿಡಿ ಉದ್ಯೋಗಿಗಳಿಗೆ ಕಚೇರಿ ಸಮಯ ಬದಲಾವಣೆ ಮಾಡಲಾಗಿದೆ. ನವೆಂಬರ್ 15 ರಿಂದ ಫೆಬ್ರವರಿ 15ರ ವರೆಗೆ ಈ ಹೊಸ ಸಮಯ ಜಾರಿಯಲ್ಲಿರಲಿದೆ ಎಂದಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ ಸರ್ಕಾರಿ ಕಚೇರಿಗಳು ಇನ್ನು ಮುಂದೆ ಬೆಳಗ್ಗೆ 10 ರಿಂದ ಸಂಜೆ 6.30ರ ವರೆಗೆ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕಚೇರಿಗಳು ಬೆಳಗ್ಗೆ 8.30 ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿವೆ. ಸಾಮಾನ್ಯ ದಿನಗಳಲ್ಲಿ ದೆಹಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ 9.30 ರಿಂದ ಸಂಜೆ 6ರ ವರೆಗೆ ಮತ್ತು ಎಂಸಿಡಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸುತ್ತವೆ.
ಈ ಎರಡೂ ಕಚೇರಿಗಳ ಸಮಯದಲ್ಲಿ ಕೇವಲ 30 ನಿಮಿಷದ ಅಂತರವಿರುವ ಹಿನ್ನೆಲೆ ನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಇದರಿಂದ ನಗರದ ವಾಯು ಮಾಲಿನ್ಯ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಡುತ್ತದೆ. ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವ ಎದುರಾಗುತ್ತದೆ.
ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆಯ ಒತ್ತಡ ಏಕಕಾಲದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತದೆ. ದೆಹಲಿಯ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲು ಪರಿಸರ ಇಲಾಖೆಯ ಹಿರಿಯ ವೈಜ್ಞಾನಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಸಮಯದ ಬದಲಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
2025ರ ನವೆಂಬರ್ 15 ರಿಂದ 2026 ಫೆಬ್ರವರಿ 15 ನಡುವೆ ಮಾಲಿನ್ಯದ ಮಟ್ಟ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ, ಸರ್ಕಾರಿ ಕಚೇರಿಗಳಿಗೆ ಹೊಸ ಚಳಿಗಾಲದ ಸಮಯವನ್ನು ಜಾರಿಗೆ ತರಲಾಗಿದೆ. ಈ ವೇಳೆ ಸಂಚಾರ ಹೊರೆಯನ್ನು ಹೆಚ್ಚು ಸಮವಾಗಿ ವಿತರಿಸುವ ಮೂಲಕ ನಾಗರಿಕರಿಗೆ ಉತ್ತಮ ಗಾಳಿಯ ಗುಣಮಟ್ಟವನ್ನು ಖಚಿತಪಡಿಸುವುದು ಗುರಿಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.


