ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷಾ (ಪಿಎಂ) ವರದಿ ಬಹಿರಂಗವಾಗಿದ್ದು, ಅತ್ಯಂತ ಸಮೀಪದಿಂದ (ಕ್ಲೋಸ್ ರೇಂಜ್) ಶಾಟ್‌ಗನ್‌ನಿಂದ ಗುಂಡು ಹಾರಿಸಿ ವ್ಯಕ್ತಿಯನ್ನು ಎನ್ ಕೌಂಟರ್ ಮಾಡಿರುವುದು ದೃಢಪಟ್ಟಿದೆ.

ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣ ಸಂಖ್ಯೆ 166/2026 (BNS ಸೆಕ್ಷನ್ 103(1)) ಅಡಿಯಲ್ಲಿ ಮೃತ ಸೆಬಾಸ್ಟಿಯನ್ ಡೇವಿಡ್ ಕುಮಾರ್ (36) ಅವರ ಮೃತದೇಹದ ಶವಪರೀಕ್ಷೆಯನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (MMC&RI) ವಿಧಿವಿಜ್ಞಾನ ತಜ್ಞರ ತಂಡ ನಡೆಸಿದೆ.
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ದುಷ್ಕರ್ಮಿಗಳು ಅತ್ಯಂತ ಸಮೀಪದಿಂದಲೇ ಶಾಟ್‌ಗನ್‌ನಿಂದ ಎರಡೆರಡು ಬಾರಿ ಗುಂಡು ಹಾರಿಸಿದ್ದಾರೆ. ಮೃತನ ಎಡ ಎದೆ ಭಾಗ ಮತ್ತು ಬಲ ತೊಡೆಯ ಒಳಭಾಗಕ್ಕೆ ನೇರವಾಗಿ ಗುಂಡುಗಳು ತಗುಲಿವೆ. ಗುಂಡು ತಗುಲಿದ ಜಾಗದಲ್ಲಿ ಬಟ್ಟೆ ಹಾಗೂ ಚರ್ಮ ಸುಟ್ಟ ಗಾಯದ ಗುರುತುಗಳು (Charring & Singeing), ಕಪ್ಪಾದ ಹೊಗೆಯ ಅಂಶಗಳು (Soot) ಹಾಗೂ ಗನ್ ಪೌಡರ್‌ನ ಕಲೆಗಳು ಪತ್ತೆಯಾಗಿವೆ. ಈ ಎಲ್ಲಾ ಅಂಶಗಳು ಗುಂಡನ್ನು ಅತಿ ಸಮೀಪದಿಂದಲೇ ಹಾರಿಸಿರುವುದನ್ನು ಸ್ಪಷ್ಟಪಡಿಸಿವೆ.
ಎಡ ಎದೆಯ ಮೇಲ್ಭಾಗದಲ್ಲಿ 8.5 ಸೆಂ.ಮೀ x 6 ಸೆಂ.ಮೀ ವಿಸ್ತೀರ್ಣದ ಆಳವಾದ ಗಾಯವಾಗಿದ್ದು, ಶಾಟ್‌ಗನ್ ಗುಂಡಿನ ರಭಸಕ್ಕೆ 2, 3 ಮತ್ತು 4ನೇ ಪಕ್ಕೆಲುಬುಗಳು ಮುರಿದಿವೆ. ಅಲ್ಲದೆ, ಗುಂಡು ಒಳನುಗ್ಗಿದ ರಭಸಕ್ಕೆ ಎಡ ಶ್ವಾಸಕೋಶದ ಮೇಲ್ಭಾಗ ಹಾಗೂ ಹೃದಯದ ಎಡಭಾಗವು ಸಂಪೂರ್ಣವಾಗಿ ಛಿದ್ರಗೊಂಡಿದೆ. ಇದರಿಂದಾಗಿ ಎದೆಯ ಕುಳಿಯಲ್ಲಿ ಬರೋಬ್ಬರಿ 600 ಮಿ.ಲೀ. ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ.
ಮೃತನ ಬಲ ತೊಡೆಯ ಒಳಭಾಗದಲ್ಲಿ 13 ಸೆಂ.ಮೀ x 8 ಸೆಂ.ಮೀ ಗಾತ್ರದ ಆಳವಾದ ಗಾಯವಾಗಿದ್ದು, ಒಳಗಿನ ಮಾಂಸಖಂಡಗಳು ನಜ್ಜುಗುಜ್ಜಾಗಿವೆ. ಗುಂಡೇಟಿನ ತೀವ್ರತೆಗೆ ಶಾಟ್‌ಗನ್‌ನಿಂದ ಸಿಡಿದ ಸಣ್ಣ ಸೀಸದ ಗುಂಡುಗಳು (ಪೆಲ್ಲೆಟ್ಸ್) ಹೊಟ್ಟೆಯ ಒಳಪದರ, ಯಕೃತ್ತು (ಲಿವರ್) ಹಾಗೂ ಗುಲ್ಮ (ಸ್ಪ್ಲೀನ್) ಭಾಗಗಳಿಗೂ ತೂರಿಹೋಗಿವೆ. ಇದಲ್ಲದೆ, ಮೃತನ ಹಣೆಯ ಮೇಲೆ, ಮೂಗಿನ ತುದಿಯಲ್ಲಿ ಮತ್ತು ಬಲ ಕೆನ್ನೆಯ ಮೇಲೆಯೂ ರಕ್ತಸಿಕ್ತ ಗಾಯದ ಗುರುತುಗಳು ಕಂಡುಬಂದಿವೆ.
ಎಡ ಎದೆ ಹಾಗೂ ಬಲ ತೊಡೆಗೆ ಬಿದ್ದ ತೀವ್ರ ಪ್ರಮಾಣದ ಶಾಟ್‌ಗನ್ ಗಾಯಗಳಿಂದಾಗಿ ಉಂಟಾದ ತೀವ್ರ ರಕ್ತಸ್ರಾವ ಮತ್ತು ಆಘಾತದಿಂದ (Haemorrhage and Shock) ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.


