ಪೊಲೀಸ್‌ ಠಾಣೆಗಳ ಸಿಸಿಟಿವಿ ಒಂದು ನಿಮಿಷವೂ ಸ್ಥಗಿತಗೊಳ್ಳುವಂತಿಲ್ಲ: ಹೈಕೋರ್ಟ್‌ ಖಡಕ್ ಸೂಚನೆ

ಬೆಂಗಳೂರು: ಪೊಲೀಸ್‌ ಠಾಣೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಒಂದು ನಿಮಿಷವೂ ಸ್ಥಗಿತಗೊಳ್ಳದೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮತ್ತು ರಾಜ್ಯಾದ್ಯಂತ ಸಿಸಿಟಿವಿ ವ್ಯವಸ್ಥೆಗಳ ಆರೋಗ್ಯ ಮತ್ತು ಕಾರ್ಯನಿರ್ವಹಣೆಯನ್ನು ಕಡ್ಡಾಯವಾಗಿ ಲೈವ್‌ ಟ್ರ್ಯಾಕ್‌ ಮಾಡುವಂತೆ ಹೈಕೋರ್ಟ್‌, ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ.

ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ 11 ತಿಂಗಳುಗಳ ಕಾಲ ವಿದ್ಯುತ್‌ ಕಡಿತಗೊಂಡಿದ್ದರಿಂದ ಮತ್ತು ವಿದ್ಯುತ್‌ ಬ್ಯಾಕಪ್‌ ಇಲ್ಲದ ಕಾರಣ 2024ರ ಸೆ.4ರ ಸಿಸಿಟಿವಿ ದೃಶ್ಯಾವಳಿಗಳನ್ನು ಠಾಣೆ ನೀಡದಿರುವುದನ್ನು ಪ್ರಶ್ನಿಸಿ ವಿ.ಶೈಲಜಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ನಿರ್ದೇಶನ ನೀಡಿದೆ. ಅಲ್ಲದೆ, ಅರ್ಜಿದಾರರು ಹೇಳಿರುವ ದಿನದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2.30ರ ನಡುವೆ ವಿದ್ಯುತ್‌ ವ್ಯತ್ಯಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತು.

ಕಂಪ್ಯೂಟರ್‌ ವಿಭಾಗಕ್ಕೆ ಲೆಕ್ಕಪರಿಶೋಧನಾ ವ್ಯವಸ್ಥೆ ರೂಪಿಸಲು ಸೂಚಿಸುವಂತೆ ನ್ಯಾಯಾಲಯವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ (ಗೃಹ) ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

”ಪ್ರತಿಯೊಂದು ಠಾಣೆಯ ಮತ್ತು ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾ, ರೆಕಾರ್ಡ್‌, ಯುಪಿಎಸ್‌ ಮತ್ತು ಸಂಪರ್ಕಿತ ಉಪಕರಣಗಳ ಸ್ಥಿತಿಯನ್ನು ಪ್ರದರ್ಶಿಸುವ ಕೇಂದ್ರೀಕೃತ ಡ್ಯಾಶ್‌ಬೋರ್ಡ್‌ ರೂಪಿಸಬೇಕು. ಒಂದು ವೇಳೆ ಆ ಉಪಕರಣಗಳು ವಿಫಲವಾದರೆ ವ್ಯವಸ್ಥೆಯು ಸ್ವಯಂಚಾಲಿತ ಎಚ್ಚರಿಕೆ ಸಂದೇಶಗಳನ್ನು ನೀಡುವಂತಿರಬೇಕು,” ಎಂದು ನ್ಯಾಯಾಲಯ ಹೇಳಿದೆ.

‘ಶಫಿ ಮೊಹಮ್ಮದ್‌ ವರ್ಸಸ್‌ ಹಿಮಾಚಲ ಪ್ರದೇಶ’ ರಾಜ್ಯ ಪ್ರಕರಣದಲ್ಲಿಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ”ವಿದ್ಯುತ್‌ ಕಡಿತದ ಸಮಯದಲ್ಲಿಸಿಸಿಟಿವಿ ವ್ಯವಸ್ಥೆಯು ಕಾರ್ಯನಿರ್ವಹಿಸದೆ ಇರಲು ಬಿಟ್ಟರೆ ಪೊಲೀಸ್‌ ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಉದ್ದೇಶವೇ ವಿಫಲವಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ, ”ಯುಪಿಎಸ್‌ ಸುಮಾರು 11 ತಿಂಗಳುಗಳ ಕಾಲ ಹೇಗೆ ದೋಷಪೂರಿತವಾಗಿ ಉಳಿಯುತ್ತದೆ?” ಎಂದು ಪ್ರಶ್ನಿಸಿದ್ದರು. ಅಲ್ಲದೆ, ”ಠಾಣಾಧಿಕಾರಿ ಹೆಬ್ಬೆರಳುಗಳನ್ನು ತಿರುಗಿಸುತ್ತಾ ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಮೇಲ್ವಿಚಾರಣಾಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಪ್ರತಿಕ್ರಿಯಿಸಿದ್ದರು.

Star Of Kudla

Learn More →

Leave a Reply

Your email address will not be published. Required fields are marked *