ಮಂಗಳೂರು: ಕರ್ನಾಟಕದ ಕರಾವಳಿ ಭಾಗದ ಜನರ ದಶಕಗಳ ಬಹುಮುಖ್ಯ ಬೇಡಿಕೆಯಾಗಿದ್ದ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಗೆ (South Western Railway – SWR) ಸೇರ್ಪಡೆಗೊಳಿಸಲು ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಈ ಮಹತ್ವದ ಆದೇಶದ ಪ್ರಕಾರ, ಸದರಿ ವ್ಯಾಪ್ತಿಯು ದಕ್ಷಿಣ ರೈಲ್ವೆಯಿಂದ (Southern Railway – SR) ಬೇರ್ಪಟ್ಟು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸುಪರ್ದಿಗೆ ಬರಲಿದೆ.

ದಕ್ಷಿಣ ರೈಲ್ವೆಯ ವ್ಯಾಪ್ತಿಯಲ್ಲಿದ್ದ ಮಂಗಳೂರು ಭಾಗವನ್ನು ನೈರುತ್ಯ ರೈಲ್ವೆಗೆ ವರ್ಗಾಯಿಸುವ ಪ್ರಸ್ತಾವನೆಯನ್ನು ಪರಿಶೀಲಿಸಿದ ರೈಲ್ವೆ ಸಚಿವಾಲಯದ ಸಕ್ಷಮ ಪ್ರಾಧಿಕಾರವು ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.
ಪ್ರಸ್ತುತ ದಕ್ಷಿಣ ರೈಲ್ವೆಯ (SR) ಪಾಲಕ್ಕಾಡ್ ವಿಭಾಗದ ಅಡಿಯಲ್ಲಿರುವ ಮಂಗಳೂರು ವ್ಯಾಪ್ತಿಯನ್ನು (ಉಳ್ಳಾಲ ನಿಲ್ದಾಣವೂ ಸೇರಿದಂತೆ) ನೈರುತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗುತ್ತಿದೆ. ಇದರೊಂದಿಗೆ ನೈರುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ (ರೈಲುಗಳ ವಿನಿಮಯ ಕೇಂದ್ರ) ಈ ಹಿಂದೆ ಇದ್ದ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.
ತೋಕೂರು ರೈಲ್ವೆ ನಿಲ್ದಾಣವು ಮೊದಲಿನಂತೆಯೇ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಅಡಿಯಲ್ಲೇ ಮುಂದುವರಿಯಲಿದ್ದು, ಇದು ಕೊಂಕಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ಈವರೆಗೆ ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವೆ ಇದ್ದ ವಲಯ ಗಡಿಗಳು ಇನ್ನು ಮುಂದೆ ಕೊಂಕಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ನಡುವಿನ ಗಡಿಗಳಾಗಿ ಪರಿವರ್ತನೆಯಾಗಲಿವೆ.
ಈ ಎಲ್ಲಾ ಹೊಸ ವ್ಯಾಪ್ತಿ ಮತ್ತು ಗಡಿ ಬದಲಾವಣೆಗಳು ದಿನಾಂಕ 1 ಅಕ್ಟೋಬರ್ 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಗೆಜೆಟ್ ಅಧಿಸೂಚನೆಯಲ್ಲಿ ನಿಖರವಾದ ಗಡಿ ವಿವರಗಳನ್ನು ಪ್ರಕಟಿಸಲಾಗುತ್ತದೆ. ಹುದ್ದೆಗಳ ವರ್ಗಾವಣೆ, ಸಿಬ್ಬಂದಿಗಳಿಂದ ಆಯ್ಕೆ ಆಹ್ವಾನಿಸುವುದು ಹಾಗೂ ಕಂಟ್ರೋಲ್ ಬೋರ್ಡ್‌ಗಳ ವರ್ಗಾವಣೆ ಸೇರಿದಂತೆ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ನೈರುತ್ಯ ರೈಲ್ವೆ, ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ದಿನೇಶ್ ಕುಮಾರ್ ವಶಿಷ್ಠ ಸೂಚಿಸಿದ್ದಾರೆ.


