ಸೋಷಿಯಲ್ ಮೀಡಿಯಾ ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖಾತೆಗಳನ್ನು ತೆರೆಯಲು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಷಕರ ಪರಿಶೀಲಿಸಿದ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಮತ್ತು ಅಪ್ರಾಪ್ತ ವಯಸ್ಕರನ್ನು ಟ್ರ್ಯಾಕಿಂಗ್ ಮಾಡುವುದನ್ನು ಹಾಗೂ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ನೀಡುವುದನ್ನು ನಿಷೇಧಿಸುವ ಪ್ರಸ್ತಾವಿತ ಖಾಸಗಿ ಸದಸ್ಯರ ಮಸೂದೆಯೊಂದು ಮುನ್ನೆಲೆಗೆ ಬಂದಿದೆ.

ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಅವರು ಪ್ರಸ್ತಾಪಿಸಿರುವ ‘ಸೇಫ್‌ಗಾರ್ಡಿಂಗ್ ಹೆಲ್ತಿ ಇಂಟರ್ನೆಟ್ ಎನ್ವಿರಾನ್‌ಮೆಂಟ್ಸ್ ಫಾರ್ ಲಿಟಲ್ ಡಿಜಿಟಲ್-ನೇಟಿವ್ಸ್’ (SHIELD) ಮಸೂದೆ, 2025 ರ ಪ್ರಕಾರ, ಅಪ್ರಾಪ್ತ ವಯಸ್ಕರಿಗೆ ಲಭ್ಯವಿರುವ ಪ್ಲಾಟ್‌ಫಾರ್ಮ್‌ಗಳಿಗೆ ಕಡ್ಡಾಯ ವಯಸ್ಸು-ಪರಿಶೀಲನಾ ವ್ಯವಸ್ಥೆಗಳು ಮತ್ತು ಪೋಷಕರು ಮಕ್ಕಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅನುಮತಿಸುವ ಡ್ಯಾಶ್‌ಬೋರ್ಡ್‌ಗಳನ್ನು ಒದಗಿಸಬೇಕು.
ಈ ಮಸೂದೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮಗು ಎಂದು ವ್ಯಾಖ್ಯಾನಿಸುತ್ತದೆ ಮತ್ತು ಸಾಮಾಜಿಕ ಮಾಧ್ಯಮಗಳು ಹಾಗೂ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಟ್ಟುನಿಟ್ಟಾದ ಸುರಕ್ಷತಾ ಜವಾಬ್ದಾರಿಗಳನ್ನು ಹೇರಲು ಪ್ರಯತ್ನಿಸುತ್ತದೆ. ಮಕ್ಕಳು ಅಶ್ಲೀಲತೆ, ಜೂಜು, ಹಿಂಸಾತ್ಮಕ ಅಥವಾ ಉಗ್ರವಾದಿ ವಸ್ತುಗಳು ಮತ್ತು ಮಾದಕ ದ್ರವ್ಯಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಲು ಪ್ಲಾಟ್‌ಫಾರ್ಮ್‌ಗಳು ಕ್ರಮ ಕೈಗೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸುವ ಪ್ಲಾಟ್‌ಫಾರ್ಮ್‌ಗಳಿಗೆ 10 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾಗಲು ನಿಗದಿಯಾಗಿತ್ತಾದರೂ ಕಲಾಪ ಮುಂದೂಡಲ್ಪಟ್ಟಿತ್ತು. ಸ್ವಾತಂತ್ರ್ಯದ ನಂತರ ಕೇವಲ ಒಂದು ಡಝನ್‌ನಷ್ಟು ಖಾಸಗಿ ಸದಸ್ಯರ ಮಸೂದೆಗಳು ಮಾತ್ರ ಕಾನೂನಾಗಿ ರೂಪುಗೊಂಡಿರುವುದು ಇಲ್ಲಿ ಗಮನಾರ್ಹ


