ಡೇವಿಡ್ ಡಿಸೋಜ ಅವರ ಶೂಟೌಟ್ ಪ್ರಕರಣ: ಯುಪಿಸಿಎಲ್ ಗುತ್ತಿಗೆ ವಿಚಾರವೇ ಕೊಲೆಗೆ ಕಾರಣ- ಆರೋಪಿ ರಾಜು ಖಾತೆಗೆ ₹2 ಲಕ್ಷಕ್ಕೂ ಅಧಿಕ ಹಣ ಪಾವತಿ- ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಕಾಂಗ್ರೆಸ್‌ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರವೇ ಕೊಲೆಗೆ ಪ್ರಮುಖ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಆರೋಪಿಗಳ ಬಂಧನದ ಬಳಿಕ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕರಣದ ಎ1 ಆರೋಪಿ ಶೂಟರ್ ರಾಜು ಎಂಬಾತನ ಬ್ಯಾಂಕ್ ಖಾತೆಗೆ ₹2 ಲಕ್ಷಕ್ಕೂ ಅಧಿಕ ಹಣ ಪಾವತಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೊಲೆಗೂ ಮುನ್ನ ಹಾಗೂ ಕೊಲೆಯ ಬಳಿಕ ಹಂತ ಹಂತವಾಗಿ ಹಣ ಪಾವತಿಯಾಗಿದ್ದು, ಈ ಹಣದ ಮೂಲ ಹಾಗೂ ಪಾವತಿಸಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದರು.

ಡೇವಿಡ್ ಡಿಸೋಜ ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಅಂದಾಜು ₹2ರಿಂದ ₹3 ಕೋಟಿ ಮೊತ್ತದ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿ ಅವರಿಗೂ ಮತ್ತೊಬ್ಬ ಗುತ್ತಿಗೆದಾರನಿಗೂ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ವ್ಯಕ್ತಿಯೊಬ್ಬರು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯಿದ್ದು, ಸುಪಾರಿ ನೀಡಿದವರ ಪತ್ತೆಗಾಗಿ ಈಗಾಗಲೇ ವಿಶೇಷ ತಂಡವನ್ನು ಹೊರರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

9 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ

ಎ1 ಆರೋಪಿ ರಾಜು 9 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಂದ 9 ಎಂಎಂ ಪಿಸ್ತೂಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸುಮಾರು ಎರಡು ತಿಂಗಳ ಹಿಂದೆಯೇ ಸ್ಥಳಕ್ಕೆ ಆಗಮಿಸಿ ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು. ಕೃತ್ಯಕ್ಕೆ ಸ್ಥಳೀಯವಾಗಿ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ಎರ್ಮಾಳ್ ಬಳಿ ಬೈಕ್‌ವೊಂದನ್ನು ಬಿಟ್ಟು ತೆರಳಿದ್ದು, ಆ ಬೈಕ್‌ನ್ನು ಯಾರು ಒದಗಿಸಿದ್ದರು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಗಡಿಭಾಗಗಳಲ್ಲಿ ನಾಕಾಬಂದಿ; 500ಕ್ಕೂ ಹೆಚ್ಚು ಪೊಲೀಸರ ಕಾರ್ಯಾಚರಣೆ

ಆರೋಪಿಗಳು ಉಡುಪಿ ಜಿಲ್ಲೆಯನ್ನು ದಾಟದಂತೆ ಜಿಲ್ಲೆಯ ಎಲ್ಲ ಗಡಿಭಾಗಗಳಲ್ಲಿ ನಾಕಾಬಂದಿ ನಡೆಸಲಾಗಿತ್ತು. ಉಡುಪಿ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಗಳಲ್ಲೂ ತಪಾಸಣೆ ನಡೆಸಲಾಗಿತ್ತು. ರೈಲ್ವೆ ಪೊಲೀಸರ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, 500ಕ್ಕೂ ಹೆಚ್ಚು ಪೊಲೀಸರು ಪ್ರಕರಣದ ಬೆನ್ನತ್ತಿದ್ದರು ಎಂದು ಹರಿರಾಮ್ ಶಂಕರ್ ವಿವರಿಸಿದರು.

ಆರೋಪಿಗಳಿಗಾಗಿ ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗೂ ಕುಮಟಾ ಭಾಗಗಳಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಒತ್ತಿನೆಣೆ ಬಳಿ ಬಸ್‌ಗಳನ್ನು ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಮೂವರು ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದರು.

ಈ ವೇಳೆ ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಅವರು ರಾಜುವನ್ನು ಬೆನ್ನಟ್ಟಿದ್ದರು. ಒತ್ತಿನೆಣೆ ಬಳಿ ರಾಜು ಪಿಎಸ್‌ಐ ತೇಜಸ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪಿಎಸ್‌ಐ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಆರೋಪಿ ರಾಜು ಹಾಗೂ ಪಿಎಸ್‌ಐ ತೇಜಸ್ವಿ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಉಳಿದ ಇಬ್ಬರು ಆರೋಪಿಗಳಾದ ಅನಮೋಲ್ ಹಾಗೂ ಜಿಯಾವುಲ್ ವಜುಲ್ ಶೇಖ್ ಅವರನ್ನು ಶನಿವಾರ ಬೆಳಗ್ಗೆ ಭಟ್ಕಳ ಹಾಗೂ ಕುಮಟಾ ಭಾಗಗಳಲ್ಲಿ ಬಂಧಿಸಲಾಗಿದೆ.

ಐದು ರಾಜ್ಯಗಳಲ್ಲಿ ರಾಜು ವಿರುದ್ಧ 26 ಪ್ರಕರಣ

ಎ1 ಆರೋಪಿ ರಾಜು ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ ಒಟ್ಟು 26 ಪ್ರಕರಣಗಳಿವೆ. ಎ2 ಆರೋಪಿ ಅನಮೋಲ್ ವಿರುದ್ಧ 2018ರ ಬಳಿಕ ನಾಲ್ಕು ರಾಜ್ಯಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳಿಗೆ ಪರಸ್ಪರ ಸಂಪೂರ್ಣ ಪರಿಚಯವೂ ಇರಲಿಲ್ಲ. ಸುಳ್ಳು ಹೆಸರುಗಳನ್ನು ಹೇಳಿಕೊಂಡು ಪರಸ್ಪರ ಪರಿಚಯಿಸಿಕೊಂಡಿದ್ದರು. ಆರೋಪಿಗಳು ತಪ್ಪಿಸಿಕೊಂಡಿದ್ದರೆ ಅವರ ಬಳಿಯಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗುತ್ತಿರಲಿಲ್ಲ. ಸದ್ಯ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್‌ಗಳ ಆಧಾರದ ಮೇಲೂ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿದರು.

ಪ್ರಕರಣದಲ್ಲಿ ಸುಪಾರಿ ನೀಡಿದವರು, ಹಣದ ವಹಿವಾಟಿನ ಮೂಲ, ಬೈಕ್ ಒದಗಿಸಿದವರು ಹಾಗೂ ಆರೋಪಿಗಳಿಗೆ ಸ್ಥಳೀಯವಾಗಿ ಯಾರಾದರೂ ನೆರವು ನೀಡಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

Star Of Kudla

Learn More →

Leave a Reply

Your email address will not be published. Required fields are marked *