ಬಾಡಿಗೆ ಮನೆ ನೋಡಲು ಬಂದವರಂತೆ ನಟನೆ: ಒಂಟಿ ಮಹಿಳೆಗೆ ಟಾರ್ಗೆಟ್-₹3 ಲಕ್ಷ ಚಿನ್ನ ದೋಚಿದ್ದ ಇಬ್ಬರು ಅರೆಸ್ಟ್

ಉಳ್ಳಾಲ: ಕುರ್ನಾಡು ಕಾಯರ್ ಗೋಳಿ ಬಳಿ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಮಹಿಳೆಯ ಚಿನ್ನಾಭರಣ ದರೋಡೆ ಮಾಡಿದ ದರೋಡೆಕೋರರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಉರ್ವ ಮಠದ ಕಣಿ ನಿವಾಸಿ ಬಾಲ ಸುಬ್ರಮಣ್ಯ (49), ಮಣ್ಣಗುಡ್ಡ ಬೊಕ್ಕಪಟ್ಣ ಚರ್ಚ್ ಬಳಿ ನಿವಾಸಿ ಶ್ಯಾಮ್ ಕುಮಾರ್ (33) ಬಂಧಿತ ಆರೋಪಿಗಳು. ಆ. 3ರಂದು ಬಾಡಿಗೆ ಮನೆಯ ನೆಪದಲ್ಲಿ ಭವಾನಿ ಎಂಬವರ ಮನೆಯೊಳಗೆ ನುಗ್ಗಿ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ಮುಡಿಪು ಕಾಯರ್ ಗೋಳಿಯಿಂದ ಮಂಗಳೂರುವರೆಗಿನ ಸಿಸಿಟಿವಿ ಮತ್ತು ಬಂಟ್ವಾಳ ಮೆಲ್ಕಾರ್ ವರೆಗಿನ ಸಿಸಿಟಿವಿಯನ್ನು ಪರಿಶೀಲಿಸಿ ಆರೋಪಿಗಳು ಮಂಗಳೂರು ಮೂಲದವರು ಎನ್ನುವ ಖಚಿತ ಮಾಹಿತಿಯಂತೆ ಮಂಗಳೂರಿನ ಮರೋಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ದರೋಡೆ ಮಾಡಿದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಾಲ ಸುಬ್ರಮಣ್ಯ ಹಲಸು ಸೀಸನ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿರುವ ಹಲಸಿನ ಮರ ಇರುವ ಮನೆಗಳಿಗೆ ತೆರಳಿ ಹಲಸು ತೆಗೆಯುವ ಆಮಿಷ ನೀಡುತ್ತಿದ್ದ. ಭವಾನಿ ಅವರ ಮನೆಗೂ 20 ದಿನಗಳ ಹಿಂದೆ ಹಲಸು ಖರೀದಿಗೆ ಬಂದಿದ್ದು, ಈ ಸಂದರ್ಭದಲ್ಲಿ ಭವಾನಿ ಅವರು 2 ಹಲಸು ಹಣ್ಣು ತೆಗೆದುಕೊಡಲು ತಿಳಿಸಿದ್ದರು. ಈ ಸಂದರ್ಭದಲ್ಲಿ ಭವಾನಿ ಅವರ ಮಾಹಿತಿ ಪಡೆದಿದ್ದ ಆರೋಪಿ ಬಾಲ ಸುಬ್ರಮಣ್ಯ ದರೋಡೆಗೆ ಸ್ಕೆಚ್ ಹಾಕಿದ್ದ.

ಬಾಲ ಸುಬ್ರಮಣ್ಯನ ಸಂಬಂಧಿಕನೇ ಆಗಿದ್ದ ಶ್ಯಾಮ್ ಕುಮಾರ್ ರಿಕ್ಷಾ ಹಾಳಾಗಿದ್ದು, ಬೇರೆ ರಿಕ್ಷಾಕ್ಕೆ ಹಣ ಕೊಡಿಸುತ್ತೇನೆ ಎಂದು ಕರೆ ತಂದು ದರೋಡೆ ನಡೆಸಿದ್ದ. ಆರೋಪಿಗಳ ಪೈಕಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿದೆ. ಶ್ಯಾಮ್ ಕುಮಾರ್ ಮೊದಲ ಬಾರಿಗೆ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ.

Star Of Kudla

Learn More →

Leave a Reply

Your email address will not be published. Required fields are marked *