
ಗೋ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನ ಜಾರಿಗೆ ತಂದು ಹಲವು ವರ್ಷಗಳಾಗಿವೆ. ಆದರೆ ಇಂದು ಗೋವುಗಳು ಪರಿಸ್ಥಿತಿ ಚಿಂತಾಜನಕವಾಗಿದೆ. ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಳ್ಳುವ ಜಾನುವಾರಗಳ ಬಗ್ಗೆ ಗೋ ಪ್ರೇಮಿಗಳು ಲಕ್ಷ್ಯವೇ ಹಾಕೋದಿಲ್ಲ. ಇಲ್ಲೊಬ್ಬರು ತಮ್ಮ ಗೋ ಶಾಲೆಯಲ್ಲಿ ಅನಾಥ ಮತ್ತು ಗಾಯಗೊಂಡ ಗೋವುಗಳ ಆರೈಕೆ ಮಾಡ್ತಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನ ಜಾರಿಗೆ ತಂದಿತ್ತು. ಪೊಲೀಸರಂತೂ ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟವಾಗುವ ಗೋವುಗಳನ್ನ ರಕ್ಷಣೆ ಮಾಡುತ್ತಿದ್ದಾರೆ. ತಮ್ಮಿಂದಾದ ಪ್ರಯತ್ನವನ್ನು ಮಾಡ್ತಿದ್ದಾರೆ. ಗೋ ಸಂರಕ್ಷಣೆ ಕಾನೂನು ಜಾರಿಗೆ ಬಂದ ನಂತರ ಉತ್ತರಕನ್ನಡ ಜಿಲ್ಲೆಯಲ್ಲೂ ಕೂಡ ಪೊಲೀಸರು ಆಕ್ಟಿವ್ ಆಗಿದ್ದರು. ಆದರೆ ಗೋಪ್ರೇಮಿಗಳಿಂದ ಆಗಾಗ ಕಾಳಜಿಯ ಮಾತು ಕೇಳಿ ಬರುತ್ತೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಹಾಗಲ್ಲ. ಇಲ್ಲಿನ ದೇವತಿಶಿಟ್ಟಾದ ವೇದಾವೇದಾಂತ ಗುರುಕುಲದಲ್ಲಿ ಗೋವುಗಳಿಗೆ ರಕ್ಷಣೆ ಸಿಗುತ್ತಿದೆ.
ಕಳೆದ ಹಲವು ವರ್ಷಗಳಿಂದ ಇಲ್ಲಿನ ಪ್ರಾಚಾರ್ಯರಾದ ಶಿವಮೂರ್ತಿ ಜೋಯಿಸ ಅವರು ಗೋವುಗಳ ಆರೈಕೆ ಮಾಡ್ತಿದ್ದಾರೆ. ಕಾರವಾರ ನಗರದಲ್ಲಿ ಅಪಘಾತದಲ್ಲಿ ಗಾಯಗೊಂಡ ಹಲವು ದನಕರುಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿರುವ ಜಾನುವಾರುಗಳ ಬಗ್ಗೆ ಯಾರಾದರೂ ಮಾಹಿತಿ ನೀಡಿದರೇ ಸ್ವತಃ ಶಿವಮೂರ್ತಿ ಅವರೇ ತಮ್ಮ ಶಿಷ್ಯರೊಂದಿಗೆ ವಾಹನ ತೆಗೆದುಕೊಂಡು ಹೋಗಿ ಜಾನುವಾರು ಹೊತ್ತು ತರುತ್ತಾರೆ. ಬಳಿಕ ತಮ್ಮ ಗೋಶಾಲೆಯಲ್ಲಿ ಗೋವುಗಳಿಗೆ ಬ್ಯಾಂಡೆಜ್ ಮಾಡುವುದು, ಅವುಗಳಿಗೆ ಆಹಾರ ಒದಗಿಸುತ್ತಾರೆ. ಅಗತ್ಯವಿದ್ದಲ್ಲಿ ವೈದ್ಯರನ್ನ ಕರೆಸಿ ಚಿಕಿತ್ಸೆ ನೀಡುತ್ತಾರೆ.
ಕಳೆದ ಹಲವು ವರ್ಷಗಳಿಂದ ವೇದವೇದಾಂತ ಗುರುಕುಲದ ಆವರಣದಲ್ಲಿ ಶಿಷ್ಯರಿಂದ ಪಾಠದ ಜೊತೆಗೆ ಗೋವುಗಳ ಸಂರಕ್ಷಣೆ ನಡೆಯುತ್ತಿದೆ. ವಾಹನ ಸವಾರರು ಕೂಡ ರಸ್ತೆಯಲ್ಲಿ ಓಡಾಡುವಾಗ ಜಾಗರೂಕತೆಯಿಂದ ವಾಹನ ಚಲಿಸಬೇಕು. ಗೋವುಗಳಿಗೆ ಅಪಘಾತವಾದಾಗ ಅವುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮೂಕ ಪ್ರಾಣಿಗಳ ಜೀವ ಉಳಿಸಬೇಕೆಂದು ಶಿವಮೂರ್ತಿ ಜೋಯಿಸ ಅವರು ಮನವಿ ಮಾಡಿದ್ದಾರೆ. ಸರ್ಕಾರ ಸಹ ತೆರೆಮರೆಯಲ್ಲಿ ಕೆಲಸ ಮಾಡುವ ಗೋ ಸಂರಕ್ಷಕರಿಗೆ ಸಹಾಯ ಮಾಡಬೇಕಾಗಿದೆ.


