
ಬೈಂದೂರು, ಜೂನ್ 15: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತ್ರಾಸಿ–ಮರವಂತೆ ಬೀಚ್ನಲ್ಲಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಂಡುಬಂದಿದ್ದು, ಸಮುದ್ರ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆಗಳು ಉದ್ಭವಿಸಿವೆ.
ಅಪಾಯಕಾರಿ ಸಮುದ್ರ ಪ್ರದೇಶಗಳಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ತಡೆಗೋಡೆ ರೂಪದಲ್ಲಿ ಬಲೆ (ನೆಟ್) ಅಳವಡಿಸಲು ಸೂಚನೆ ನೀಡಿದ್ದರೂ, ಮರವಂತೆ ಅಂಗಡಿ ಸಮೀಪದ ಕೆಲವು ಭಾಗಗಳಲ್ಲಿ ಬಲೆ ಅಳವಡಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಲೆ ಇಲ್ಲದ ಪ್ರದೇಶಗಳಲ್ಲಿ ಪ್ರವಾಸಿಗರು ಸಮುದ್ರದ ಅಂಚಿಗೆ ತೆರಳಿ ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಸುರಕ್ಷತಾ ಕ್ರಮಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕೆಲವು ನಿರ್ದಿಷ್ಟ ಭಾಗಗಳನ್ನು ಮಾತ್ರ ಬಲೆ ಅಳವಡಿಕೆಯಿಂದ ಹೊರಗಿಡಲು ಕಾರಣವೇನು ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದೇ ವೇಳೆ, ಈ ವಿಚಾರದ ಕುರಿತು ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭ, ಸ್ಥಳೀಯ ಅಂಗಡಿ ಮಾಲೀಕರ ಪರವಾಗಿ ಬಂದ ವ್ಯಕ್ತಿಯೊಬ್ಬರು ಅಸಭ್ಯವಾಗಿ ವರ್ತಿಸಿ ಚಿತ್ರೀಕರಣಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಸಾರ್ವಜನಿಕರ ಜೀವ ರಕ್ಷಣೆಗಾಗಿ ಜಾರಿಗೊಳಿಸಿರುವ ಸುರಕ್ಷತಾ ನಿಯಮಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಎಲ್ಲೆಡೆ ಸಮಾನವಾಗಿ ಅನುಷ್ಠಾನಗೊಳಿಸಬೇಕು ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣ ಪರಿಶೀಲನೆ ನಡೆಸಿ, ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಜೊತೆಗೆ ಸಾರ್ವಜನಿಕ ಹಿತಾಸಕ್ತಿಯ ವರದಿಗಾರಿಕೆ ನಡೆಸುವ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಬೈಂದೂರು: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪ್ರವಾಸೋದ್ಯಮ ತಾಣ ತ್ರಾಸಿ – ಮರವಂತೆ ಬೀಚಿನಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಭಾನುವಾರ ಕಂಡು ಬಂದಿದೆ,


