ಪುತ್ತೂರಿನ ಆಡಳಿತ ಸೌಧದ ಕಚೇರಿಗೆ ಲೋಕಾಯುಕ್ತ ದಾಳಿ

ಪತ್ರಿಕಾ ಪ್ರಕಟಣೆ

ಪಿರ್ಯಾದಿದಾರರ ಚಿಕ್ಕಪ್ಪ ನವರಿಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿದ್ದು, ಪಿರ್ಯಾದಿದಾರರ ಚಿಕ್ಕಪ್ಪನವರಿಗೆ ಅನಾರೋಗ್ಯ ಇದ್ದುದರಿಂದ ಅವರು ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿ, ಪುತ್ತೂರು ಇಲ್ಲಿ ವೀಲುನಾಮೆ ಯಾನೆ ಮರಣ ಶಾಸನ ಬರೆಸಿ ಕೊಟ್ಟಿರುತ್ತಾರೆ. ಇದರ ಪ್ರಕಾರ ಅವರ ಚಿಕ್ಕಪ್ಪನ ಮರಣ ನಂತರ ಸದ್ರಿ ಜಮೀನಿನ ಸಂಪೂರ್ಣ ಹಕ್ಕು ಫಿರ್ಯಾದಿದಾರರಿಗೆ ಸೇರಿರುತ್ತದೆ. ಸದ್ರಿ ಜಮೀನು ಫಿರ್ಯಾದಿದಾರರ ಚಿಕ್ಕಪ್ಪನವರಾಗಿ ಮಂಜೂರಾಗಿ 27 ವರ್ಷ ಆಗಿರುತ್ತದೆ. ಸದರಿ ಜಮೀನನ್ನು ಪರಭಾರೆ ಮಾಡಲು ಮಾನ್ಯ ತಹಶೀಲ್ದಾರ್, ಪುತ್ತೂರು ರವರಿಂದ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇದ್ದುದರಿಂದ ಪಿರ್ಯಾದಿದಾರರ ಚಿಕ್ಕಪ್ಪನವರು ದಿನಾಂಕ ಡಿಸೆಂಬರ್ 2024 ರಂದು ತಹಶೀಲ್ದಾರರು ಪುತ್ತೂರು ತಾಲೂಕು ಇವರಿಗೆ ಸಾಗುವಳಿ ಚೀಟಿ ಮೂಲಕ ಮಾನ್ಯ ತಹಶೀಲ್ದಾರರಿಂದ ಮಂಜೂರಾದ ಜಾಗ ಮಾರಾಟ ಮಾಡುವರೇ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.

ಇಲ್ಲಿಯವರೆಗೆ ನಿರಾಕ್ಷೇಪಣಾ ಪತ್ರ ಸಿಕ್ಕಿರದೇ ಇದ್ದುದರಿಂದ ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲು ಫಿರ್ಯಾದಿದಾರರ ಚಿಕ್ಕಪ್ಪನವರು ಫಿರ್ಯಾದಿದಾರರಿಗೆ ಹೇಳಿದ್ದು, ಈ ಬಗ್ಗೆ ಪಿರ್ಯಾದಿದಾರರು ಜೂನ್ 26 2025 ರಂದು ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಗೆ ಹೋಗಿ ಕೇಸ್ ವರ್ಕರ್ ಸುನೀಲ್‌ರವರಲ್ಲಿ ತನ್ನ ಚಿಕ್ಕಪ್ಪ ರವರು ಸಲ್ಲಿಸಿದ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಕೇಸ್ ವರ್ಕರ್ ಸುನೀಲ್‌ರವರು ತಹಶೀಲ್ದಾರ್‌ರವರ ಸಹಿಗೆ ಬಾಕಿ ಇರುತ್ತದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ, ‘ತಹಶೀಲ್ದಾರರಿಗೆ (10,000/-) ಹತ್ತು ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಮತ್ತೆ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸುನೀಲ್ ಕೇಸ್ ವರ್ಕರ್, ತಹಶೀಲ್ದಾರ್ ರವರ ಕಛೇರಿ, ಪುತ್ತೂರು ತಾಲೂಕು ಮತ್ತು ತಹಶೀಲ್ದಾರ್, ಪುತ್ತೂರು ತಾಲೂಕು ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಈ ದಿನ ದಿನಾಂಕ 28.08.2025 ರಂದು ಶ್ರೀ ಸುನೀಲ್, ಕೇಸ್ ವರ್ಕರ್, ಭೂ ಸುಧಾರಣಾ ಶಾಖೆ, ತಹಶೀಲ್ದಾರ್ ಕಛೇರಿ, ಪುತ್ತೂರು ತಾಲೂಕು ರವರು ಪಿರ್ಯಾದುದಾರರಿಂದ ರೂ. 12,000/- (ಹನ್ನೆರಡು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮುಂದುವರೆದು ಪುತ್ತೂರು ತಾಲೂಕು ತಹಶೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು. ತಹಶೀಲ್ದಾರ್, ಪುತ್ತೂರು ತಾಲೂಕು ರವರು ಪ್ರಸ್ತುತ ತಲೆಮರೆಸಿಕೊಂಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖ‌ರ್ ಕೆ.ಎನ್, ಶ್ರೀ ರವಿ ಪವಾರ್ ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

News Editor

Learn More →

Leave a Reply

Your email address will not be published. Required fields are marked *