
ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಲೋಕಾಯುಕ್ತ ಸಂಸ್ಥೆಯು ಕಳೆದ ಎರಡು ವರ್ಷಗಳಲ್ಲಿ 218 ದಾಳಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈವರೆಗಿನ ತನಿಖೆಯಲ್ಲಿ ಓರ್ವ ಸರ್ಕಾರಿ ನೌಕರ ಸಹ ತಪ್ಪಿತಸ್ಥ ಎಂದು ಕಂಡುಬಂದಿಲ್ಲ ರಾಜ್ಯ ಸರ್ಕಾರ ತಿಳಿಸಿದೆ.
ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿ, ಇಂಧನ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ 2023ರಿಂದ 2025ರ ಜುಲೈ 31ರವರೆಗೆ 219 ಮಂದಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ಧಾರೆ. ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ (ತಿದ್ದುಪಡಿ) ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ತನಿಖೆ ನಡೆಸುತ್ತಿದೆ ಎಂದು ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಖಿತವಾಗಿ ಉತ್ತರಿಸಿದ್ದಾರೆ.
ದಾಖಲಾದ 218 ಪ್ರಕರಣಗಳಲ್ಲಿ ಕೆಲ ಪ್ರಕರಣಗಳು ತನಿಖಾ ಹಂತದಲ್ಲಿವೆ. ಇನ್ನು ಕೆಲ ಪ್ರಕರಣಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈವರೆಗಿನ ತನಿಖೆಯಲ್ಲಿ ಆರೋಪಿತ ಸರ್ಕಾರಿ ನೌಕರರನ್ನ ತಪ್ಪಿತಸ್ಥ ಎಂದು ನಿರ್ಣಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುನಿರತ್ನ ಕಾಲೆಳೆದ ಡಿಸಿಎಂ ಡಿಕೆಶಿ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಿ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಗ್ರೇಟರ್ ಬೆಂಗಳೂರು ವಿಧೇಯಕ ರಚನೆಯ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಶಾಸಕರಿಗೆ ಬೇಡ ಎಂದರೆ ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಾಪಸ್ ಪಡೆಯಲು ನಾನು ಸಿದ್ಧನಿದ್ದೇನೆ. ಈ ಬಗ್ಗೆ ಸುದೀರ್ಘ ಚರ್ಚೆಯಾಗಲಿ, ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುವುದು. ನಾವೇ ಬೆಳೆಸಿದ ಶಾಸಕ ಮುನಿರತ್ನ ಅವರಿಗೂ ಅವಕಾಶ ನೀಡುತ್ತೇವೆ ಎಂದರು.
ಈ ಹಂತದಲ್ಲಿ ಎದ್ದು ನಿಂತ ಮುನಿರತ್ನ ನನ್ನನ್ನು ಮರೆತು ಹೋಗಿದ್ದೀರಾ ಎಂದುಕೊಂಡಿದ್ದೆ. ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನೀನು ಯಾವುದೋ ಪ್ರಕರಣಗಳಲ್ಲಿ ಸಿಲುಕಿ ಎಲ್ಲೆಲ್ಲೋ ಓಡಾಡುತ್ತಿದ್ದೀಯ. ಹಾಗಾಗಿ ಮರೆತು ಹೋಗಿದ್ದೆ ಎಂದು ಕಾಲು ಎಳೆದರು.
ಈ ವೇಳೆ ಮುನಿರತ್ನ ಅವರು, ನನ್ನ ಮೇಲಿನ ಪ್ರಕರಣಗಳು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣಗಳನ್ನು ಸೇರಿಸಿ ಸಿಬಿಐ ತನಿಖೆಯಾಗಲಿ ಅಥವಾ ಅದಕ್ಕಿಂತಲೂ ದೊಡ್ಡ ಮಟ್ಟದ ತನಿಖೆ ಇದ್ದರೆ ಅದನ್ನು ಮಾಡಿ ಎಂದು ತಿರುಗೇಟು ನೀಡಿದರು. ಇದೇ ವಿಚಾರ ಕೆಲ ಸಮಯ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.


