
ಬೆಂಗಳೂರು: ಗಣಿ ಅಕ್ರಮ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸರ್ಕಾರಕ್ಕಾಗಿರುವ ನಷ್ಟ ವಸೂಲಿಗೆ ವಸೂಲಿ ಆಯುಕ್ತರ ನೇಮಕ ಹಾಗೂ ಪ್ರಕರಣಗಳ ವಿಚಾರಣೆ ನಡೆಸಿ, ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಲ್ಲಿಸಿದ್ದ ವರದಿಗೆ ಅನುಮೋದನೆ ನೀಡಲಾಗಿದೆ.
ವರದಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ನಷ್ಟವನ್ನು ವಸೂಲಿ ಮಾಡಲು ರಾಜ್ಯವ್ಯಾಪ್ತಿ ಒಂದೇ ವಸೂಲಿ ಪ್ರಾಧಿಕಾರ (ಆಯುಕ್ತರ)ವನ್ನು ನೇಮಿಸಬೇಕು. ಅದಕ್ಕಾಗಿ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ತಿಳಿಸಲಾಗಿತ್ತು. ಅದಕ್ಕೆ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದ್ದು, ವಸೂಲಿ ಪ್ರಾಧಿಕಾರ ರಚನೆಗೆ ಹೊಸದಾಗಿ ಕಾನೂನು ಜಾರಿಗೊಳಿಸಬೇಕಿದ್ದು, ಅದಕ್ಕೆ ಸಂಬಂಧಿಸಿದಂತೆ ಇದೇ ಅಧಿವೇಶನದಲ್ಲಿ ಹೊಸ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.


