
ಮಂಗಳೂರು: ಇಲ್ಲಿನ ಸೆಂಟ್ರಲ್ ರೈಲ್ವೆ ನಿಲ್ದಾಣ ಸಮೀಪದ ಕೈರಾಲಿ ಹೋಟೆಲ್ ಬಳಿ ಆಟೋ ಕಾಯುತ್ತಿದ್ದ ಉದ್ಯಮಿಯೊಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳೆಂದು ಸುಳ್ಳು ಹೇಳಿ ಅಪಹರಿಸಿ ಅವರ ಬಳಿ ಇದ್ದ 35 ಲಕ್ಷ ರೂ. ಮೌಲ್ಯದ ಶುದ್ಧ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ಆಗಸ್ಟ್ 13ರಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಸಮೀಪದ ಕೈರಾಲಿ ಹೋಟೆಲ್ ಬಳಿ ಆಟೋ ಕಾಯುತ್ತಿದ್ದ ಶ್ರೀ ಹರಿ ಭಾನುದಾಸ್ ಥೋರಟ್ ಎಂಬವರನ್ನು ಆರು ಜನ ಅಪರಿಚಿತರು ಇನ್ನೋವಾ ಕಾರಿನಲ್ಲಿ ಬಂದು, ತಾವು ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು, “ನಿಮ್ಮ ವಿರುದ್ಧ ಮಾಹಿತಿ ಇದೆ, ವಿಚಾರಣೆಗೆ ಬರಬೇಕು” ಎಂದು ಗದರಿಸಿ, ಶ್ರೀ ಹರಿಯವರನ್ನು ಬಲವಂತವಾಗಿ ಬಿಳಿ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಉಡುಪಿ ಹೆದ್ದಾರಿಯ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಶ್ರೀ ಹರಿಯವರ ಬಳಿ ಇದ್ದ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಶುದ್ಧ ಚಿನ್ನದ ಗಟ್ಟಿಯನ್ನು ಹೆದರಿಸಿ ಕಸಿದುಕೊಂಡು, ಕುಮಟಾ ತಾಲೂಕಿನ ಶಿರಸಿ ಬಳಿಯ ಅಂತ್ರವಳ್ಳಿಯಲ್ಲಿ ಬಿಟ್ಟು ದರೋಡೆಕಾರರು ಪರಾರಿಯಾಗಿದ್ದಾರೆ.
ಈ ಕುರಿತು ಶ್ರೀ ಹರಿಯವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಝೀರೋ ಎಫ್‌ಐಆರ್‌ನಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸರಹದ್ದಿನ ಆಧಾರದ ಮೇಲೆ ಈ ಪ್ರಕರಣವು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಅ.ಕ್ರ. 171/2025ರ ಕಲಂ 310(2), 137(2), 204 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರು, ಸಿಸಿಬಿ ಅಧಿಕಾರಿಗಳು ಮತ್ತು ಕೇಂದ್ರ ಉಪವಿಭಾಗದಿಂದ ತಂಡ ರಚಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಇತರ ಮಾಹಿತಿಗಳ ಆಧಾರದಲ್ಲಿ, ಆಗಸ್ಟ್ 18ರ ಸಂಜೆ ಮಹಾರಾಷ್ಟ್ರದ ಪುಣೆಯಲ್ಲಿ ಐವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದು, ದರೋಡೆಯಾದ ಚಿನ್ನವನ್ನು ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ವಿಚಾರಣೆ ನಡೆಸಲಾಗುವುದು. ದರೋಡೆಯಾದ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


