ಕುಂದಾಪುರ: ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ನಡೆದಿದೆ.
ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಗುಂಡೇಟಿಗೆ ಬಲಿಯಾದವರು.
ಐವನ್ ರಿಚರ್ಡ್ ಅವರು ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅವರು ತಮ್ಮ ಮೊದಲ ಪತ್ನಿ ಸೆಲ್ಮಾ ಮಸ್ಕರೇನಸ್ ಅವರನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಪಿಸ್ತೂಲ್‌ನಿಂದ ಐವನ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಐವನ್ ಅವರ ಕೊಲೆಗೆ ಹಣಕಾಸಿನ ವ್ಯವಹಾರ ಅಥವಾ ಇತರ ವ್ಯವಹಾರಿಕ ವಿಚಾರ ಕಾರಣವಾಗಿರಬಹುದೆಂಬ ಶಂಕೆ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ. ಆದರೆ ಕೊಲೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ ಹಾಗೂ ಪಿಎಸ್ಐಗಳಾದ ನಂಜಾ ನಾಯ್ಕ್, ಪುಷ್ಪಾ, ಅನೂಪ್ ನಾಯಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಕೋ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಈ ಕುರಿತು ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


