ಮನೆಯಲ್ಲಿ ರಾತ್ರಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಇಬ್ಬರು ಪುಟ್ಟ ಸಹೋದರಿಯರು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಸಮೀಪದ ಮೂಕನೂರ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಭತ್ತ ಕೊಯ್ಲು ಯಂತ್ರ ನಿರ್ವಾಹಕ ಕೆ. ಚಂದ್ರನ್ (28) ಹಾಗೂ ದಿನಗೂಲಿ ಕಾರ್ಮಿಕರಾದ ಸಿ. ಪುಷ್ಪಾ (24) ದಂಪತಿಯ ಪುತ್ರಿಯರಾದ ಸಿ. ದರ್ಶಿನಿ ಅಲಿಯಾಸ್ ದೇವದರ್ಶಿನಿ (4) ಹಾಗೂ ಆಕೆಯ ತಂಗಿ ಸಿ. ಜನನಿ ಅಲಿಯಾಸ್ ದೇವಜನನಿ (1.5/2) ಎಂದು ಗುರುತಿಸಲಾಗಿದೆ. ಮಕ್ಕಳ ಪಕ್ಕದಲ್ಲೇ ಮಲಗಿದ್ದ ತಾಯಿ ಪುಷ್ಪಾ ಅವರಿಗೂ ಹಾವು ಕಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುಟುಂಬವು ಗ್ರಾಮದ ಕಾಲುವೆಯ ದಂಡೆಯ ಬಳಿಯ ಮನೆಯಲ್ಲಿ ವಾಸವಾಗಿತ್ತು. ಪತಿ ಚಂದ್ರನ್ ಕೆಲಸದ ನಿಮಿತ್ತ ಹೈದರಾಬಾದ್ಗೆ ತೆರಳಿದ್ದರಿಂದ ಮನೆಯಲ್ಲಿ ತಾಯಿ ಪುಷ್ಪಾ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೂವರೂ ಊಟ ಮುಗಿಸಿ ನಿದ್ರೆಗೆ ಜಾರಿದ್ದರು. ರಾತ್ರಿ 10.30ರ ಸುಮಾರಿಗೆ ಮಕ್ಕಳು ತೀವ್ರವಾಗಿ ವಾಂತಿ ಮಾಡಿಕೊಳ್ಳುತ್ತಾ, ತಲೆಸುತ್ತಿ ನರಳುತ್ತಿದ್ದ ಶಬ್ದ ಕೇಳಿ ತಾಯಿ ಪುಷ್ಪಾ ಎಚ್ಚರಗೊಂಡಿದ್ದಾರೆ. ತಕ್ಷಣವೇ ಪರಿಶೀಲಿಸಿದಾಗ ಮಕ್ಕಳಿಗೆ ವಿಷಪೂರಿತ ಹಾವು ಕಚ್ಚಿರುವುದು ಗೊತ್ತಾಗಿದೆ. ಗಾಬರಿಗೊಂಡ ಪುಷ್ಪಾ ಸಹಾಯಕ್ಕಾಗಿ ಜೋರಾಗಿ ಚೀರಿಕೊಂಡಿದ್ದಾರೆ


