ಉಡುಪಿ: ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ!! ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರ ಬಂಧನ

ಉಡುಪಿ ಜಿಲ್ಲೆಯ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್‌ಗಳು ಮತ್ತು ಇತರೆ ಮಾಹಿತಿಗಳನ್ನು ಅಂಡರ್ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೇಮಂತ್ ಪೂಜಾರಿ ಈ ವ್ಯಕ್ತಿಗಳಿಗೆ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.

ಪೊಲೀಸರ ಪ್ರಕಾರ, ಈ ಸುಲಿಗೆ ಬೆದರಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಐದು ಮತ್ತು ಶಿರ್ವ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯಮಿಗಳು ಮತ್ತು ಪ್ರಮುಖ ವ್ಯಕ್ತಿಗಳಿಗೆ ಹೇಮಂತ್ ಪೂಜಾರಿ ಕರೆ ಮಾಡಿ, ಕೋಟ್ಯಂತರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನೆಂದು ಆರೋಪಿಸಲಾಗಿದೆ.

ತನಿಖೆಯ ವೇಖೆ, ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಭಟ್ರತೋಟ ಮನೆಯ ನಿವಾಸಿ ಸುರೇಶ್ ಅಮೀನ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆತ, ಸಂತ್ರಸ್ತರ ಮೊಬೈಲ್ ನಂಬರ್‌ಗಳು ಹಾಗೂ ಇತರೆ ವಿವರಗಳನ್ನು ಹೇಮಂತ್ ಪೂಜಾರಿಗೆ ಒದಗಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಉದ್ಯಮಿಯೊಬ್ಬರು ಹಣ ನೀಡಲು ವಿಫಲರಾಗಿ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಬಳಿಕ, ಆ ಉದ್ಯಮಿಯನ್ನು ಕೊಲೆ ಮಾಡಲು ಸುರೇಶ್ ಅಮೀನ್ ಮತ್ತು ಹೇಮಂತ್ ಪೂಜಾರಿ ಸಂಚು ರೂಪಿಸಿದ್ದರು ಎಂಬುದು ತಾಂತ್ರಿಕ ಸಾಕ್ಷ್ಯಗಳಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿ, ಸುರೇಶ್ ಅಮೀನ್ ಅವರ ಖಾತೆಗೆ ರೂ. 5 ಲಕ್ಷ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಖರ್ಚಾದ ಹಣವನ್ನು ಕಳೆದು, ಉಳಿದ ರೂ. 4.13 ಲಕ್ಷವನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು, ಸುಲಿಗೆ ಜಾಲ ಹಾಗೂ ಸಂಚಿಗೆ ಸಂಬಂಧಿಸಿದ ಇತರ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *