
ಪುತ್ತೂರು: ಪುತ್ತೂರಿನ ದರ್ಬೆ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಸಾರ ಮಾಡಿ ಬಂದ್ಗೆ ಕರೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ್ ಪಂಜಿಗ ಎಂಬ ಹೆಸರಿನ ವಾಟ್ಸಾಪ್ ಖಾತೆಯಿಂದ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವಂತಹ ಸಂದೇಶವನ್ನು ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೆ, ಬಂದ್ಗೆ ಕರೆ ನೀಡಿ ಜನರು ಅಕ್ರಮವಾಗಿ ಗುಂಪುಗೂಡಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವಂತೆ ಪ್ರಚೋದನೆ ನೀಡಿರುವುದು ಕಂಡುಬಂದಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆ ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2026ರಂತೆ, BNS 2023ರ ಸೆಕ್ಷನ್ 353(2), 57 ಮತ್ತು 189 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


