ಕಡಬ: ಯುವತಿ ಹಾಗು ಕುಟುಂಬದ ಮೇಲೆ ನೈತಿಕ ಪೊಲೀಸ್ ಗಿರಿ- 9 ಜನರ ವಿರುದ್ಧ FIR ದಾಖಲು

ಕಡಬ ತಾಲೂಕಿನ ಕೋಲ್ಪೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದ ಸದಸ್ಯರ ಮೇಲೆ ಗುಂಪೊಂದು ನೈತಿಕ ಪೊಲೀಸ್‌ಗಿರಿ ನಡೆಸಿ, ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 12ರ ರಾತ್ರಿ ಈ ಕೃತ್ಯ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ಮೆಲ್ಕಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿದ ಬಳಿಕ ತಮ್ಮ ಅಂಗಡಿ ಮಾಲೀಕ ಜಹೀರ್ ಅವರ ಸ್ನೇಹಿತ ಸಿಪ್ಪಾನ್ ಅವರ ಕಾರಿನಲ್ಲಿ ತಾಯಿ ಸಫಿಯಾ ಜೊತೆ ಮನೆಗೆ ತೆರಳುತ್ತಿದ್ದರು. ಯುವತಿಯನ್ನು ಮನೆ ಬಳಿ ತಲುಪಿಸಿ ವಾಪಸ್ ತೆರಳುತ್ತಿದ್ದ ಕಾರು ಮತ್ತು ಬೈಕ್ ಅನ್ನು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೋಲ್ಪೆ ಎಂಬಲ್ಲಿ ಅಡ್ಡಗಟ್ಟಿದ ಪುಂಡರ ಗುಂಪು ನೈತಿಕ ಪೊಲೀಸ್‌ಗಿರಿ ನಡೆಸಿ ಗಲಾಟೆ ಆರಂಭಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಯುವತಿಯ ಮೇಲೆಯೂ ಪುಂಡರು ಹಲ್ಲೆ ನಡೆಸಿದ್ದಾರೆ. ಯುವತಿಯ ಕಪಾಳಕ್ಕೆ ಹೊಡೆದು ಪ್ರಾಣಬೆದರಿಕೆ ಒಡ್ಡಿದ್ದಲ್ಲದೆ, ಗಲಾಟೆ ಬಿಡಿಸಲು ಬಂದ ಜಮಾಲ್ ಎಂಬುವವರನ್ನು ತಳ್ಳಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಅಕ್ಕನನ್ನು ರಕ್ಷಿಸಲು ಬಂದ ಸಹೋದರಿ ಫಾಸಿಲಾ ಮೇಲೆಯೂ ಹಲ್ಲೆ ನಡೆಸಿ ದೂಡಿ ಹಾಕಿದ್ದಾರೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸಂತ್ರಸ್ತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ವೇಳೆ ಸಂತ್ರಸ್ತೆ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಜಾಬಿರ್, ಸಿದ್ದಿಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಎಂಬ 9 ಜನರ ವಿರುದ್ಧ BNS ಸೆಕ್ಷನ್ 115(2), 126(2), 189(2), 190, 191(2), 351(2) ಮತ್ತು 352 ರ ಅಡಿಯಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *