ಮಂಗಳೂರಿನ ಸಿಟಿ ಸೆಂಟರ್ KFCಗೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ- 9 ತಿಂಗಳ ಹಿಂದಿನ ಮಾಂಸ ಪತ್ತೆ..! ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ

ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್‌ಸಿ (KFC) ಮಳಿಗೆಯಿಂದ ಆನ್‌ಲೈನ್ ಮೂಲಕ ತರಿಸಿಕೊಂಡ ಚಿಕನ್ ದುರ್ವಾಸನೆ ಬೀರುತ್ತಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಅಧಿಕಾರಿಗಳ ತಂಡವು ಮಳಿಗೆಯ ಅಡುಗೆ ಕೋಣೆ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಚಿಕನ್ ಕರಿಯಲು ಬಳಸುವ ಎಣ್ಣೆಯ ಗುಣಮಟ್ಟವನ್ನು ಕೂಲಂಕಷವಾಗಿ ತಪಾಸಣೆ ನಡೆಸಿತು.

ಆಗಸ್ಟ್ 15ರಂದು ಗ್ರಾಹಕರೊಬ್ಬರು ಈ ಮಳಿಗೆಯಿಂದ ಆನ್‌ಲೈನ್ ಮೂಲಕ ‘ಪೆರಿ ಪೆರಿ ಚಿಕನ್’ ಆರ್ಡರ್ ಮಾಡಿದ್ದರು. ಮನೆಗೆ ತಲುಪಿದ ಚಿಕನ್ ದುರ್ವಾಸನೆ ಬೀರುತ್ತಿದ್ದು, ಆಹಾರ ಹಾಳಾಗಿರುವ ಶಂಕೆ ವ್ಯಕ್ತಪಡಿಸಿ ಅವರು ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮಳಿಗೆಯಲ್ಲಿದ್ದ ಫ್ರೋಝನ್ ಲೆಗ್ ಪೀಸ್ ಚಿಕನ್, ತಾಪಮಾನ ಸಮತೋಲನಗೊಳಿಸಿದ ಚಿಕನ್ ಹಾಗೂ ಮಸಾಲೆ ಬೆರೆಸಿದ ಚಿಕನ್ ಸೇರಿದಂತೆ ಮೂರು ಬಗೆಯ ಚಿಕನ್ ಮಾದರಿಗಳನ್ನು ಹಾಗೂ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಂಗ್ರಹಿಸಿದ ಎಲ್ಲಾ ಮಾದರಿಗಳನ್ನು ಗುಣಮಟ್ಟ ಹಾಗೂ ಬ್ಯಾಕ್ಟೀರಿಯಾ ಪರೀಕ್ಷೆಗಾಗಿ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ದಾಸ್ತಾನು ಪತ್ತೆಯಾಗಿದ್ದು, ಈ ಉತ್ಪನ್ನಗಳ ಶೆಲ್ಫ್ ಲೈಫ್ ಆರು ತಿಂಗಳಿಗಿಂತ ಹೆಚ್ಚಿರುತ್ತದೆ ಎಂದು ಮಳಿಗೆಯ ಸಿಬ್ಬಂದಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್., ಮಳಿಗೆಯಲ್ಲಿ ಸೂಕ್ತ ಸ್ವಚ್ಛತೆ ಕಾಪಾಡುವಂತೆ ಹಾಗೂ ಹಳಸಿದ ಅಥವಾ ಅನುಮಾನಾಸ್ಪದ ಆಹಾರ ಪದಾರ್ಥಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮಳಿಗೆಗೆ ಅಧಿಕೃತ ನೋಟಿಸ್ ನೀಡಲಾಗುತ್ತಿದ್ದು, ಸಂಸ್ಥೆಯ ಉತ್ತರ ಹಾಗೂ ಪ್ರಯೋಗಾಲಯದ ವರದಿ ಆಧರಿಸಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *