
ಕಪ್ಪು ಕಲ್ಲು ಗಣಿಗಾರಿಕೆ ಮಾಡಿ, ಅದರಿಂದ ಲಕ್ಷಾಂತರ ವ್ಯವಹಾರ ಮಾಡಿದ ಬಳಿಕ ಗಣಿಗಾರಿಕೆ ನಡೆಸಿದ ಗುಂಡಿಯನ್ನು ಮುಚ್ಚುವ ಗೋಜಿಗೂ ಹೋಗುತ್ತಿಲ್ಲ. ಇಂಥಹ ಗುಂಡಿಗಳು ಮಳೆಗಾಲದಲ್ಲಿ ನೀರಿನಿಂದ ತುಂಬಿ ಮಕ್ಕಳ ಪಾಲಿಗೆ ಮೃತ್ಯುಕೂಪಗಳಾಗಿ ಬದಲಾಗುತ್ತಿವೆ. ಗಣಿಗಾರಿಕೆ ನಡೆಸಿದ ಬಳಿಕ ಗುಂಡಿಯನ್ನು ಮುಚ್ಚಬೇಕು, ಇಲ್ಲವೇ ತಡೆಬೇಲಿ ಹಾಕಿ ಜನ,ಜಾನುವಾರುಗಳಿಗೆ ನಿರ್ಬಂಧಿಸಬೇಕು ಎನ್ನುವ ನಿಯಮವಿದ್ದರೂ, ಪಾಲನೆ ಮಾಡುವವರು ಮಾತ್ರ ಕಾಣೆಯಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಕಲ್ಲು ಕಲ್ಲಿನ ಗಣಿಗಾರಿಗೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆದು, ಇನ್ನು ಕೆಲವು ಪಡೆಯದೆ ಭೂಮಿಯನ್ನು ಅಗೆದು ಗಣಿಗಾರಿಕೆ ನಡೆಯುತ್ತದೆ. ಗಣಿ ಇಲಾಖೆಯು ನಿಗದಿಪಡಿಸಿದ ಆಳಕ್ಕಿಂತ ದುಪ್ಪಟ್ಟು ಆಳದಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಿಲ್ಲಿಸಿದ ಬಳಿಕ ಆ ಗುಂಡಿಗಳ್ಲಿ ನೀರು ತುಂಬಿ ಜನ,ಜಾನುವಾರುಗಳ ಪ್ರಾಣಕ್ಕೆ ಕಂಟಕವಾಗುತ್ತಿದೆ. ಜಿಲ್ಲೆಯಲ್ಲಿ ಗಣಿ ಹೊಂಡಗಳಲ್ಲಿ ತುಂಬಿದ ನೀರಿಗೆ ಬಿದ್ದು, ಇಪ್ಪತ್ತಕ್ಕೂ ಮಿಕ್ಕಿದ ಬಾಲಕರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಹಿಂದೆ ಗಣಿ ಹೊಂಡಗಳನ್ನು ಮುಚ್ಚಬೇಕು ಮತ್ತು ಅಂತಹ ಹೊಂಡಗಳಿರುವ ಪ್ರದೇಶದ ಸುತ್ತ ತಡೆಬೇಲಿ ಹಾಕಿ ಎಚ್ಚರಿಕೆ ಫಲಕ ಅಳವಡಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾದ ಕಾರಣ ಗಣಿ ಗುಂಡಿಗಳಿಗೆ ಬಿದ್ದು ಸಾವನ್ನಪ್ಪುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಇತ್ತೀಚೆಗೆ ನಾಲ್ವರು ಬಾಲಕರು ಇಂತಹುದೇ ಗಣಿ ಹೊಂಡದಲ್ಲಿ ಈಜಲು ಹೋಗಿ ಓರ್ವ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಹಿಂದ ಬಂಟ್ವಾಳ, ಪುತ್ತೂರು ಮತ್ತು ಮೂಡಬಿದಿರೆ ತಾಲೂಕುಗಳಲ್ಲೂ ಇಂತಹ ಹಲವು ಘಟನೆಗಳು ನಡೆದಿದ್ದರೂ, ಸಂಬಂದಪಟ್ಟ ಇಲಾಖೆಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿವೆ.
ಗುಂಡಿಗೆ ಬಿದ್ದು ಸಾವನ್ನಪ್ಪುವ ಪ್ರಕರಣಗಳು ನಡೆದಾಗಲೆಲ್ಲಾ ಒಮ್ಮೆಗೆ ಇಲಾಖೆ,ಸರಕಾರ ನಿದ್ದೆಯಿಂದ ಎದ್ದಂತೆ ಕಾರ್ಯಪ್ರವೃತ್ತವಾಗುತ್ತದೆ. ಆದರೆ ಘಟನೆ ಮಾಸುವ ಮೊದಲೇ ಮತ್ತೆ ಅಂತಹುದೇ ಘಟನೆ ಇನ್ನೊಂದು ಭಾಗದಲ್ಲಿ ಸಂಭವಿಸೋದು ಇಲಾಖೆಗಳ ನಿರ್ಲಕ್ಷ್ಯ ಅನ್ನೋದು ಸಾರ್ವಜನಿಕರ ಆರೋಪವಾಗಿದೆ. ಇನ್ನಾದರೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಇಂತಹ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಲು ಎನ್ನುವ ಒತ್ತಾಯಗಳೂ ಕೇಳಿ ಬರಲಾರಂಭಿಸಿದೆ.
ರಜೆಯ ಸಂದರ್ಭದಲ್ಲಿ ಮಕ್ಕಳು ಸಾಮಾನ್ಯವಾಗಿ ಎಲ್ಲಾ ಕಡೆ ಆಟವಾಡಲು ಹೋಗುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಇಂತಹ ಮೃತ್ಯುಕೂಪಗಳಿಂದ ರಕ್ಷಿಸುವ ಕಾರ್ಯ ನಡೆಯಬೇಕಿದೆ.


