
ದಕ್ಷಿಣಕನ್ನಡ: ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿರುವ ಜಾಗವನ್ನು ಹುಡುಕಿಕೊಂಡು ಬರೋದು ಸಹಜ. ಹೀಗೆ ಬೆಚ್ಚಗಿನ ಜಾಗದಲ್ಲಿ ಇರುವ ಹಾವಿಗೆ ತಿಳಿಯದೆ ತುಳಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಇದು ವಿಷಕಾರಿ ಹಾವುಗಳಿಗೆ ಮಾತ್ರ ಅನ್ವಯವಾಗುತ್ತೆ. ಭೂಮಿ ಮೇಲೆ ವಿಷಕಾರಿಯಲ್ಲದ ಹಲವು ಜಾತಿಯ ಹಾವುಗಳಿದ್ದು, ಅವುಗಳಲ್ಲಿ ಕೇರೆ ಹಾವು ಕೂಡಾ ಒಂದು. ಮನುಷ್ಯನಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಒಂದು ಪ್ರಕಾರದಲ್ಲಿ ಮನುಷ್ಯ ಸ್ನೇಹಿಯಾಗಿ ಈ ಕೇರಿ ಹಾವುಗಳಿವೆ.
ಕೃಷಿ ಭೂಮಿ ಹಾಗು ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವ ಜಾಗಕ್ಕೆ ಇಲಿ-ಹೆಗ್ಗಣಗಳ ತೊಂದರೆ ಹೇಳತೀರದು. ಅಂತಹ ಜಾಗದಲ್ಲೇ ಹೆಚ್ಚಾಗಿ ಠಿಕಾಣಿ ಹೂಡುವ ಈ ಕೇರಿ ಹಾವುಗಳು ಇಲಿ-ಹೆಗ್ಗಣಗಳ ಸಂತತಿಯನ್ನೇ ಸದ್ದಿಲ್ಲದೆ ಇಲ್ಲದಾಗಿಸುತ್ತೆ ಈ ಕೇರೆ ಹಾವುಗಳು. ಕೇರಿ ಹಾವುಗಳ ಬಗ್ಗೆ ಹಲವು ರೀತಿಯ ತಪ್ಪು ಅಭಿಪ್ರಾಯಗಳೂ ಇದ್ದು, ಇವುಗಳು ತಮ್ಮ ಬಾಲದಿಂದ ಹೊಡೆಯುತ್ತವೆ ಅನ್ನೋದು ಇವುಗಳಲ್ಲಿ ಒಂದು.
ಹಾಗಾದರೆ ಕೇರೆ ಹಾವುಗಳು ನಿಜವಾಗಿಯೂ ತಮ್ಮ ಬಾಲದ ಮೂಲಕ ಎದುರಾಳಿಗೆ ಹೊಡೆಯುತ್ತದೆಯೋ ಅನ್ನೋದಕ್ಕೆ ಉರಗತ್ಞರು ಹೇಳೋದೇ ಬೇರೆ. ಕೇರೆ ಹಾವುಗಳು ಯಾವತ್ತೂ ತಮ್ಮ ಬಾಲದ ಮೂಲಕ ಹೊಡೆಯುವುದಿಲ್ಲ ಎನ್ನುತ್ತಾರೆ ನುರಿತ ಉರಗತಜ್ಞರು. ಕೇರೆ ಹಾವುಗಳು ಅಪಾಯದ ಸಂದರ್ಭದಲ್ಲಿ ಓಡಿ ಹೋಗುವ ಸಂದರ್ಭಗಳಲ್ಲಿ ಕೆಲವೊಮ್ಮೆ ತಮ್ಮ ಬಾಲವನ್ನು ಮೇಲ್ಮುಖವಾಗಿ ಮಾಡಿ ಓಡುತ್ತವೆ.
ತಮ್ಮ ಹರಿಯುವ ವೇಗ ಹೆಚ್ಚಿಸಿಕೊಳ್ಳುವ ಉದ್ಧೇಶದಿಂದ ಕೇರೆ ಹಾವುಗಳು ಈ ರೀತಿ ಮಾಡುತ್ತವೆ ವಿನಹ ಆಕ್ರಮಣ ಮಾಡುವ ದೃಷ್ಟಿಯಿಂದ ಈ ರೀತಿ ಮಾಡೋದಿಲ್ಲ ಎನ್ನೋದು ಉರಗತಜ್ಞರ ಅನುಭವದ ಮಾತಾಗಿದೆ. ಕೇರೆ ಹಾವುಗಳು ಕೃಷಿಕರ ಸ್ನೇಹಿತನಾಗಿದ್ದು, ಇವುಗಳು ಇರುವ ಕಾರಣಕ್ಕೇ ಇಲಿ-ಹೆಗ್ಗಣಗಳಿಂದ ನಾಶವಾಗುವ ಲಕ್ಷಾಂತರ ಮೌಲ್ಯದ ಆಹಾರ ದಾಸ್ತಾನಗಳು ಸುರಕ್ಷಿತವಾಗಿ ಉಳಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಕೇರೆ ಹಾವುಗಳ ಮೇಲಿನ ತಪ್ಪು ಕಲ್ಪನೆಗಳಿಂದ ಜನ ಕೇರೆ ಹಾವುಗಳನ್ನು ಕೊಲ್ಲುವ ಪ್ರಕ್ರಿಯೆಯಲ್ಲೂ ತೊಡಗುತ್ತಿದ್ದು, ಇವುಗಳ ಸಂಖ್ಯೆ ಕುಸಿಯಲೂ ಕಾರಣವಾಗುತ್ತಿವೆ.


