
ಕುಮಟಾ: ಕುಮಟಾ ತಾಲೂಕಿನ ಕಾಗಾಲ ಗ್ರಾಮದ ಕಿರುಬೇಲೆ ಮೂಲ ನಿವಾಸಿಗಳು ಅನಾದಿ ಕಾಲದಿಂದಲೂ ಗುಡ್ಡ-ಬೆಟ್ಟದ ಮೂಲಕ ಬಳಸುತ್ತಿದ್ದ ಸಂಚಾರ ದಾರಿ ಮುಕ್ತಗೊಳಿಸುವಂತೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟವು ಗುರುವಾರ ಜಿಲ್ಲಾಧಿಕಾರಿ ಮುಖಾಂತರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.
ಸುಮಾರು 10 ರಿಂದ 12 ಕುಟುಂಬಗಳ ವಾಸವಾಗಿರುವ ಕಿರಬೇಲೆ ಗ್ರಾಮಸ್ಥರು ಸಮುದ್ರ ದಂಡೆ, ಜಟಗೇಶ್ವರ ದೇವಸ್ಥಾನ, ಗುರುಮಠ, ಐತಿಹಾಸಿಕ ಕೋಟೆ, ಗುಹೆ, ಸ್ಮಶಾನ ಹಾಗೂ ಹೊರ ಊರುಗಳ ಸಂಪರ್ಕಕ್ಕಾಗಿ ಈ ದಾರಿಯನ್ನು ಬಳಸಿ ಬರುತ್ತಿದ್ದಾರೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೇ ರೈತರ ಹಿತದೃಷ್ಟಿಯಿಂದ ಈ ದಾರಿಗೆ ಹಕ್ಕು ನೀಡಲಾಗಿದ್ದು, ಸರ್ಕಾರದ ಅನುದಾನದ ನೆರವಿನಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಬ್ಲೋಗೆನ್ ವೆಲ್‌ನೆಸ್ ಪ್ರೈ. ಲಿಮಿಟೆಡ್ ಹೆಸರಿನ ಅಸ್ಥಿತ್ವವಿಲ್ಲದ ಕಂಪನಿಯ ಪರವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತಡೆದು, ಹೈಕೋರ್ಟ್ ಆದೇಶವನ್ನೇ ತಿರುಚಿ ವರದಿ ಸಲ್ಲಿಸಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕಂಪನಿಯವರು ಕಬ್ಬಿಣದ ಗೇಟ್ ಅಳವಡಿಸಿ ಗ್ರಾಮಸ್ಥರ ಸಂಚಾರವನ್ನೇ ನಿರ್ಬಂಧಿಸಿದ್ದು, ಶಾಲೆ-ಕಾಲೇಜು, ಆಸ್ಪತ್ರೆ ಹಾಗೂ ದಿನನಿತ್ಯ ಜೀವನಕ್ಕೂ ತೊಂದರೆಯಾಗಿದೆ ಎಂದೂ ಮನವಿಯಲ್ಲಿ ದೂರಲಾಗಿದೆ.
ಹೈಕೋರ್ಟ್ ತೀರ್ಪಿನಂತೆ ಗೇಟ್ ತೆರವುಗೊಳಿಸಿ ಸಂಚಾರ ದಾರಿಯನ್ನು ಮುಕ್ತಗೊಳಿಸುವುದರ ಜೊತೆಗೆ, ಬ್ಲೋಗೆನ್ ವೆಲ್‌ನೆಸ್ ಪ್ರೈ. ಲಿಮಿಟೆಡ್ ಗೆ ನೀಡಲಾದ 0.9896 ಹೆಕ್ಟೇರ್ ಅರಣ್ಯ ಜಾಗದ ಲೀಸ್ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಿ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಜೊತೆಗೆ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪುನಃ ಆರಂಭಿಸಲು ಅವಕಾಶ ಕಲ್ಪಿಸಬೇಕು ಹಾಗೂ ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ, ತಾಲೂಕಾಧ್ಯಕ್ಷ ಇಂ. ಪ್ರೀತಮ್ ಮಾಸೂರಕರ್, ವಿ ಎನ್ ನಾಯ್ಕ ಇದ್ದರು.


