ಪರವಾನಿಗೆ ಕೂಡ ಇಲ್ಲದೆ ನಡೆಸುತ್ತಿರುವ ಪೆಟ್ರೋಲ್ ಪಂಪ್ ನಲ್ಲಿ ಸೋರಿಕೆ, ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿನ ಕೊಟ್ಯಾಡಿಯಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ನಿಯಮಬಾಹಿರವಾಗಿ ನಿರ್ಮಿಸಲಾದ ಪೆಟ್ರೋಲ್‍ ಪಂಪ್ ಪರವಾನಿಗೆ ಇಲ್ಲದೆ ನಡೆಯುತ್ತಿದ್ದು, ಇದರಲ್ಲಿ ಸೋರಿಕೆ ಇದೆ ಎಂಬ ಮಾಹಿತಿ ಇದೆ. ರಸ್ತೆಯ ಬದಿಯಲ್ಲಿ ಇಂಟರ್‍ ಲಾಕ್ ಅಳವಡಿಕೆ ಮಾಡಿದ ಪರಿಣಾಮ ಚರಂಡಿ ಪೂರ್ಣವಾಗಿ ಮುಚ್ಚಲ್ಪಟ್ಟಿದೆ. ತಕ್ಷಣ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸೂಫಿ ಇಂತಿಯಾಜ್, ಉಮ್ಮರ್ ಫಾರೂಕ್ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ನಿವೃತ್ತರಾಗಿರುವ ಇಬ್ರಾಹಿಂ ಅವರ ಸಹೋದರನ ಮಗಳು ನಿಜಿಮಾ ಆಲಿ ಮಾಣಿಪ್ಪಾಡಿ ಅವರ ಹೆಸರಲ್ಲಿರುವ ಈ ಪೆಟ್ರೋಲ್ ಪಂಪ್‍ಗೆ ಗ್ರಾ.ಪಂ ನಿಂದ ಪರವಾನಿಗೆ ಇಲ್ಲ. ಹಾಗಿದ್ದರೂ ಅನಧಿಕೃತವಾಗಿ ಇದನ್ನು ಪೆಂಟ್ರೋಲ್ ಪಂಪ್‍ನ್ನು ನಡೆಸಲಾಗುತ್ತಿದೆ. ರಾಜ್ಯ ಹೆದ್ದಾರಿಯಿಂದ ಕನಿಷ್ಟ 40 ಮೀಟರ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂಬುವುದು ಕಡ್ಡಾಯವಾದ ನಿಯಮ. ಆದರೆ ಈ ಪೆಟ್ರೋಲ್ ಪಂಪು ರಸ್ತೆಯಿಂದ ಕೇವಲ 20 ಮೀಟರ್ ದೂರದಲ್ಲಿ ನಿರ್ಮಿಸಲಾಗಿದೆ. ಅನಧಿಕೃತವಾದ ಮಾನದಂಡವನ್ನೇ ಪಾಲಿಸದೆ ನಿರ್ಮಿಸಲಾಗಿರುವ ಈ ಪೆಟ್ರೋಲ್ ಪಂಪ್ ಬಗ್ಗೆ ಯಾವುದೇ ಇಲಾಖೆಯೂ ತಲೆಕೆಡಿಸಿಕೊಂಡಿಲ್ಲ. ಬಡವರ್ಗದ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಗೂಡಂಗಡಿ ಹಾಕಿದರೆ ತಕ್ಷಣ ತೆಗೆದು ಬಿಸಾಡುವ ಅಧಿಕಾರಿಗಳು ಈ ಕಟ್ಟಡ ಅನಧಿಕೃತವಾಗಿದ್ದರೂ ಮೌನವಾಗಿದ್ದಾರೆ ಎಂದು ಅವರು ಆರೋಪಿಸಿದರು.

ಕೊಟ್ಯಾಡಿಯಲ್ಲಿ ನಿರ್ಮಿತವಾದ ಅಡೂರು ಪ್ಯೂಲ್ಸ್ (ನಯನ ಎನರ್ಜಿ) ಹೆಸರಲ್ಲಿರುವ ಈ ಪೆಟ್ರೋಲ್ ಪಂಪ್‍ನಲ್ಲಿ ದಾಸ್ತಾನು ಟ್ಯಾಂಕ್ ಸೋರಿಕೆಯಾಗಿದೆ ಎಂಬ ವಿಚಾರ ಹರಡುತ್ತಿದೆ. ಒಂದು ವೇಳೆ ಸೋರಿಕೆಯಾದರೆ ಇಲ್ಲಿನ ಪರಿಸರದಲ್ಲಿರುವ ಕುಟುಂಬಗಳಿಗೆ ಆಪತ್ತು ಉಂಟಾಗುವ ಸಾಧ್ಯತೆ ಇದೆ. ಪೆಟ್ರೋಲ್ ಬಂಕ್ ಪರಿಸರ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯಗಳು ತುಂಬಿಕೊಂಡಿವೆ. ಅನಿಲ ಸೋರಿಕೆ ಉಂಟಾದರೆ ಇದರಿಂದ ಸಾರ್ವಜನಿಕರ ಜೀವಹಾನಿಯಾಗುವ ಸಾಧ್ಯತೆ ಇದ್ದು, ತಕ್ಷಣ ಈ ಪೆಟ್ರೋಲ್ ಪಂಪ್‍ನಲ್ಲಿ ಸೋರಿಕೆ ಬಗ್ಗೆ ಸಂಬಂಧ ಪಟ್ಟ ಇಲಾಖೆ ಪರಿಶೀಲನೆ ನಡೆಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚರಂಡಿಗೆ ಇಂಟರ್‍ಲಾಕ್
ರಾಜ್ಯ ಹೆದ್ದಾರಿಯ ನಿಯಮವನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಕ್ಕೆ ರಸ್ತೆ ಬದಿಯಲ್ಲಿದ್ದ ಚರಂಡಿಯನ್ನು ಮುಚ್ಚಿ ಇಂಟರ್‍ಲಾಕ್ ಅಳವಡಿಕೆ ಮಾಡಲಾಗಿದೆ. ಇದರಿಂದ ಮಳೆ ನೀರು ಚರಂಡಿಯಲ್ಲಿದೆ ರಸ್ತೆಯಲ್ಲಿಯೇ ಹರಿದು ಸಮೀಪದ ಜಮೀನಿಗಳು ಹರಿಯುತ್ತಿದೆ. ಇದರಿಂದ ಕಷ್ಟಪಟ್ಟು ಮಾಡಿರುವ ಕೃಷಿಗೆ ಹಾನಿಯಾಗುತ್ತಿದೆ. ಇದೇ ಮಾರ್ಗದಲ್ಲಿ ಹೋಗುವ ಶಾಲಾ ಪುಟಾಣಿಗಳಿಗೂ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ತಹಶೀಲ್ದಾರ್, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಗ್ರಾಪಂ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಗಿದೆ. ಆದರೆ ಯಾರೂ ಕೂಡಾ ಸ್ಪಂಧನೆ ಮಾಡಿಲ್ಲ. ಇದೊಂದು ಸಾರ್ವಜನಿಕ ಕಾಳಜಿಯ ವಿಚಾರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಅಬ್ದುಲ್ ಹಮೀದ್, ಅಬ್ದುಲ್ ಜವಾದ್, ಶಮೀಮ್, ಶಿಹಾಬ್ ನೈತಡ್ಕ, ಹಬೀಬ್, ಮುತ್ತಲಿಬ್ ಹಾಗೂ ಸಾಧಿಕ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *