ಕುರ್‌ಆನ್ 30 ಕಾಂಡ ಬರೆದು ಕುಂಬ್ರ ಮರ್ಕಝುಲ್ ಹುದಾ ಕಾಲೇಜ್ ವಿದ್ಯಾರ್ಥಿನಿಯ ಅಭೂತಪೂರ್ವ ಸಾಧನೆ

ಪುತ್ತೂರು: ಮುಸ್ಲಿಮರ ಪವಿತ್ರ ಕುರ್‌ಆನ್ ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡಿದ್ದು, ಆ ಸಂದರ್ಭದಲ್ಲಿ ಅದನ್ನು ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರಂತೆ. ಇದೀಗ ಪುತ್ತೂರು ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯೋರ್ವರು(ಪ್ರಸ್ತುತ ಹಳೆ ವಿದ್ಯಾರ್ಥಿ) ಏಕಾಗ್ರತೆಯೊಂದಿಗೆ ಸುಮಾರು 5 ವರ್ಷಗಳ ಕಾಲ ನಿರಂತರ ಪರಿಶ್ರಮ ನಡೆಸಿ ಪವಿತ್ರ ಕುರ್‌ಆನ್‌ನ 30 ಕಾಂಡಗಳನ್ನು ಬರೆಯುವ ಮೂಲಕ ಗತ ಇತಿಹಾಸವನ್ನು ಮರುಸೃಷ್ಠಿ ಮಾಡಿದ್ದಾರೆ.

ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಈ ಅಭೂತಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಪುತ್ತೂರು ತಾಲೂಕಿನ ಬೈತಡ್ಕ ನಿವಾಸಿಯಾಗಿರುವ ಇಸ್ಮಾಯಿಲ್ ಹಾಜಿ ಮತ್ತು ಝಹ್‌ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ ಸಜ್‌ಲ ಅವರು ಕುರ್‌ಆನ್ ಬರವಣಿಗೆ ಕಾಯಕವನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅವರು ಇದೇ ಕಾಲೇಜ್‌ನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ತನ್ನ ಕಲಿಕೆಯ ಜೊತೆಗೆ ಈ ಸಾಹಸಕ್ಕೂ ಕೈ ಹಾಕಿದ ಸಜ್‌ಲ ಇಸ್ಮಾಯಿಲ್ ಅವರು 2025ರ ಆಗಸ್ಟ್ ನಲ್ಲಿ ಬರವಣಿಗೆ ಪೂರ್ಣಗೊಳಿಸಿದ್ದಾರೆ.

2021ರಲ್ಲಿ ಬರವಣಿಗೆ ಆರಂಭಿಸಿದ್ದರೂ ಕೆಲವೊಂದು ಕಾರಣಗಳಿಂದಾಗಿ ಮುಂದುವರಿಸಲು ಸಾಧ್ಯವಾಗದೆ ತನ್ನ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಆದರೆ ತನ್ನ ಹಠ ಬಿಡದ ಸಜ್‌ಲ 2024ರ ಅಕ್ಟೋಬರ್‌ನಿಂದ ಮತ್ತೆ ತನ್ನ ಬರವಣಿಗೆಯನ್ನು ಪುನರಾರಂಭಿಸಿ 2025ರ ಆಗಸ್ಟ್ ನಲ್ಲಿ ಸುಂದರವಾದ ಅಕ್ಷರಗಳನ್ನು ಪೋಣಿಸಿದ ಪವಿತ್ರ ಕುರ್‌ಆನ್ ಪ್ರತಿಯನ್ನು ಸಿದ್ದಪಡಿಸಿದ್ದಾರೆ.
30 ಕಾಂಡಗಳನ್ನು ಹೊಂದಿರುಯವ ಈ ಕುರ್‌ಆನ್ ಆಕರ್ಷಕವಾದ ಕೆಂಪು ಜೊತೆಗೆ ಚಿನ್ನಮಿಶ್ರಿತ ಬಣ್ಣದ ಹೊರಪುಟ ಹೊದಿಕೆಯ ವಿನ್ಯಾಸವನ್ನು ಹೊಂದಿದ್ದು, ಜೊತೆಗೆ ಒಟ್ಟು 604 ಪುಟಗಳನ್ನು ಹೊಂದಿದೆ. ಇದನ್ನು ಬರೆದು ಮುಗಿಸಲು ಅವರು ಒಟ್ಟು 302 ದಿನಗಳನ್ನು ಬಳಸಿಕೊಂಡಿದ್ದಾರೆ. ಅವರೇ ಹೇಳುವಂತೆ ಒಂದು ಪೇಜ್ ಬರೆಯಲು 4 ಗಂಟೆಗಳ ಅವಧಿ ಬೇಕಾಗಿತ್ತು. ಕೆಲವೊಂದು ದಿನಗಳಲ್ಲಿ 8 ಗಂಟೆಗಳನ್ನು ಬಳಸಿಕೊಂಡು 2 ಪುಟಗಳನ್ನು ರಚನೆ ಮಾಡಿದ್ದಾರೆ. ಒಟ್ಟಾರೆ ಬರೆದು ಮುಕ್ತಾಯ ಮಾಡಲು ಅವರು 2416 ಗಂಟೆಗಳ ಬಳಕೆಯಾಗಿದೆ. ಇದಕ್ಕಾಗಿ ಬಿಳಿ, ತಿಳಿನೀಲಿ, ತಿಳಿ ಹಸಿರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಕಪ್ಪು ಬಣ್ಣದ ಕಲಂ ಮತ್ತು ಮಷಿಯಿಂದ ಅಕ್ಷರದ ರೂಪ ಕೊಡಲಾಗಿದೆ.

ಈ ಕುರ್‌ಆನ್ ಲೋಕಾರ್ಪಣಾ ಕಾರ್ಯಕ್ರಮವು ಪುತ್ತೂರಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನಲ್ಲಿ ನಡೆಸಲಾಯಿತು. ಕೇರಳದ ಮರ್ಕಝ್ ನಾಲೇಜ್ ಸಿಟಿ ಮುರ‍್ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಕುರ್‌ಆನ್ ಪ್ರತಿಯನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಉಪಾಧ್ಯಕ್ಷ ಡಾ.ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಇಂದ್ರಾಜೆ, ಕಾರ್ಯದರ್ಶಿ ಅಬ್ದುಲ್ ರಶೀದ್ ಸಂಪ್ಯ, ಶರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ, ಉಪ ಪ್ರಾಂಶುಪಾಲ ಜಲೀಲ್ ಸಖಾಫಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಕಡಬ, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ, ಶರೀಅತ್ ವಿಭಾಗ ಮುಖ್ಯಸ್ಥ ಹನೀಫ್ ಸಖಾಫಿ ಕಡಬ, ಸಜ್‌ಲ ಅವರ ತಂದೆ ಇಸ್ಮಾಯಿಲ್ ಹಾಜಿ ಬೈತಡ್ಕ, ತಾಯಿ ಝಹ್‌ರಾ ಜಾಸ್ಮಿನ್ ಮತ್ತಿತ್ತರರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *