ಸಿಬಿಐ, ದೆಹಲಿ ಪೊಲೀಸರೆಂದು ಬೆದರಿಕೆ: ಉಡುಪಿಯ ವ್ಯಕ್ತಿಗೆ 15.98 ಲಕ್ಷ ರೂ. ಸೈಬರ್ ವಂಚನೆ!

ಉಡುಪಿ: ಸಿಬಿಐ ಹಾಗೂ ದೆಹಲಿ ಪೊಲೀಸರೆಂದು ಪರಿಚಯಿಸಿಕೊಂಡು, ಬಂಧನದ ಭೀತಿ ಹುಟ್ಟಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15.98 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಶೇಷಾಚಲ (51) ಎಂಬವರಿಗೆ ಅಕ್ಟೋಬರ್ 18ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ದೆಹಲಿಯ ಐಸಿಐಸಿಐ ಬ್ಯಾಂಕ್‌ನಲ್ಲಿ ಅವರ ಹೆಸರಿನ ಪಾಸ್‌ಬುಕ್ ಪತ್ತೆಯಾಗಿದ್ದು, ಅದು ಪಂಕಜ್ ಶರ್ಮಾ ಎಂಬಾತನ ಮನಿ ಲಾಂಡರಿಂಗ್, ಡ್ರಗ್ಸ್ ಹಾಗೂ ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲು ನ್ಯಾಯಾಲಯದಿಂದ ಆದೇಶ ಬಂದಿದ್ದು, ತಕ್ಷಣ ದೆಹಲಿಗೆ ಬರಬೇಕು ಅಥವಾ ವಿಡಿಯೋ ಕರೆ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಬೆದರಿಕೆ ಹಾಕಿದ್ದಾನೆ.

ಹಿಂದಿ ಭಾಷೆ ಅರ್ಥವಾಗದ ಕಾರಣ ಶೇಷಾಚಲ ಅವರು ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ಬಳಿಕ ಆಕೆಗೆ ವಿಡಿಯೋ ಕರೆ ಬಂದಿದೆ. ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ತಾನು ದೆಹಲಿ ಪೊಲೀಸರ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡು, ಪ್ರಕರಣದ ವಿವರಗಳನ್ನು ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಹಾಗೂ ಪ್ರತಿ ಗಂಟೆಗೊಮ್ಮೆ ಮಾಹಿತಿ ನೀಡಬೇಕೆಂದು ಎಚ್ಚರಿಸಿದ್ದಾನೆ.

ಬಳಿಕ ನಿರಂತರವಾಗಿ ವಿಡಿಯೋ ಕರೆ ಮಾಡುತ್ತಿದ್ದ ಆರೋಪಿತರು, ನ್ಯಾಯಾಧೀಶರು, ಸಿಬಿಐ ಹಾಗೂ ಆರ್‌ಬಿಐ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ತನಿಖೆಯ ಭೀತಿ ಹುಟ್ಟಿಸಿದ್ದಾರೆ. ಶೇಷಾಚಲ ಅವರ ಬಳಿ ಇದ್ದ ಹಣ, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು, ಆರ್‌ಬಿಐ ತನಿಖೆಯ ನೆಪದಲ್ಲಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ.

ಆರೋಪಿತರ ಮಾತುಗಳನ್ನು ನಂಬಿದ ಶೇಷಾಚಲ ಅವರು ಅಕ್ಟೋಬರ್ 31ರಂದು ಯೆಸ್ ಬ್ಯಾಂಕ್ ಖಾತೆಗೆ 11 ಲಕ್ಷ ರೂ. ಹಾಗೂ ನವೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 4,98,976 ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.

ಈ ಮೂಲಕ ಒಟ್ಟು 15,98,976.40 ರೂ. ಹಣವನ್ನು ಆರೋಪಿತರು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಶೇಷಾಚಲ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *