ಬೆಂಗಳೂರು: ವಕೀಲರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್ (42) ಮೃತ ದುರ್ದೈವಿ. ಭಾನುವಾರ ರಾತ್ರಿ 11:30 ರಿಂದ 12 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ಮಂಜುನಾಥ್ ಅವರ ಮನೆಗೆ ಬಂದ ಇಬ್ಬರು ಹಂತಕರು ಬಾಗಿಲು ಬಡೆದಿದ್ದಾರೆ. ಮಂಜುನಾಥ್ ಅವರು ಬಾಗಿಲು ತೆಗೆಯುತ್ತಿದ್ದಂತೆ, ನೇರವಾಗಿ ಅವರ ಹಣೆಗೆ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
5 ಸಾವಿರ ಬಾಡಿಗೆಗೆ ನಡೀತಾ ಕೊಲೆ?
ಮಾರತ್ತಹಳ್ಳಿ ಎಸಿಪಿ ಸುಧಾಕರ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು, ಕೊಲೆ ಸುತ್ತ ಪೊಲೀಸರು ಅನುಮಾನ ಹುತ್ತ ಮೂಡಿದೆ. ಕೋಟ್ಯಾಂತರ ರೂಪಾಯಿ ಆಸ್ತಿ ಒಡೆಯ ಕೇವಲ ಐದು ಸಾವಿರ ಬಾಡಿಗೆ ಹಣಕ್ಕೆ ಕೊಲೆಯಾದ್ನಾ..!? ಅಲ್ಲದೇ ಕೊಲೆಯಾದ ವಕೀಲನಿಗೂ ಸಂಬಂಧಿಕರಿಗೂ ಭೂ ವ್ಯಾಜ್ಯ ಇತ್ತು ಎನ್ನಲಾಗ್ತಿದೆ. ಬಾಡಿಗೆ ವಿಚಾರಕ್ಕೆ ನಡೆದ ಕೊಲೆಯೋ ಅಥವಾ ಸುಪಾರಿ ಹತ್ಯೆನಾ ಅನ್ನೋ ಆಯಾಮದಲ್ಲಿ ತನಿಖೆ ನಡೆಸಲಾಗ್ತಿದೆ.
ಫುಡ್ ಡೆಲಿವರಿ ಬಾಯ್ಗಳು ಮೃತ ಮಂಜುನಾಥ್ ಒಡೆತನದ ಶೆಡ್ನಲ್ಲಿ ವಾಸವಾಗಿದ್ದರು. ಬಿಹಾರ ಮೂಲದ ಆರೋಪಿಗಳು ಬೆಂಗಳೂರಿನಲ್ಲಿ ಮಾಡ್ತಿದಿದ್ದು ಡೆಲಿವರಿ ಬಾಯ್ ಕೆಲಸ. ಆದ್ರೆ ಇವರ ಕೈಗೆ ಮೇಡ್ ಪಿಸ್ತೂಲ್ ಬಂದಿದ್ದು ಹೇಗೆ..!? ಹತ್ಯೆಗೂ ಮೊದಲೇ ಹಲವು ದಿನಗಳ ಮುನ್ನ ಪಿಸ್ತೂಲ್ ತಂದಿರೋ ಶಂಕೆ ವ್ಯಕ್ತವಾಗಿದೆ. ಫುಡ್ ಡೆಲಿವರಿ ಬಾಯ್ಗೆ ಗನ್ ಸಪ್ಲೈ ಮಾಡಿದ್ದು ಯಾರೂ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಮಂಜುನಾಥ್ ಅವರು ವೈಟ್ಫೀಲ್ಡ್ ಭಾಗದಲ್ಲಿ ಹೊಂದಿದ್ದ ಜಮೀನನ್ನ ಶೆಡ್ಗಳಿಗೆ ಬಾಡಿಗೆಗೆ ನೀಡಿದ್ದರು. ಈ ಜಮೀನನ್ನ ಆರೋಪಿಗಳು ಬಾಡಿಗೆಗೆ ಪಡೆದಿದ್ದರು. ಕೃತ್ಯ ನಡೆಯುವುದಕ್ಕೂ ಒಂದು ಗಂಟೆ ಮುಂಚೆ ಬಾಡಿಗೆ ಹಣ ಪಾವತಿಸುವ ವಿಚಾರವಾಗಿ ಮಂಜುನಾಥ್ ಹಾಗೂ ಆರೋಪಿಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಹಣಕಾಸಿನ ವೈಮನಸ್ಸು ಹಾಗೂ ಜಮೀನು ವ್ಯಾಜ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಸದ್ಯ ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಹಂತಕರಿಗಾಗಿ ಬಲೆ ಬೀಸಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.


