ಹಣ, ಚಿನ್ನದೊಂದಿಗೆ ವಿಡಿಯೋ ಹಂಚಿಕೊಂಡಿದ್ದ ಯುಟ್ಯೂಬರ್‌: 944 ಗ್ರಾಂ ಚಿನ್ನ, ವಜ್ರಾಭರಣ ಕಳವು

ಹಣ ಹಾಗೂ ಬಂಗಾರದೊಂದಿಗೆ ತನ್ನ ಐಷಾರಾಮಿ ಜೀವನದ ವಿಡಿಯೋಗಳನ್ನು ಹಂಚಿಕೊಂಡಿದ್ದ ಯುಟ್ಯೂಬರ್‌ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ಸಮೀಪದ ಧಮ್ಮತ್ತುಕೋಣಂನಲ್ಲಿ ನಡೆದಿದೆ. ‘ಇಷ್ಟೊಂದು ಆಭರಣ, ಇಷ್ಟೊಂದು ಹಣ’ ಎಂಬ ಬರಹದೊಂದಿಗೆ ವಿಐಪಿ ಗಾರ್ಡನ್ ನಿವಾಸದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಯುಟ್ಯೂಬರ್‌ ಮಧುಮಿತಾ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಇದಾದ ಬಳಿಕ ಕಟಿಂಗ್ ಮಷಿನ್ ಬಳಸಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, 118 ಸವರನ್ ಚಿನ್ನ (944 ಗ್ರಾಂ) ಹಾಗೂ ವಜ್ರದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಜೊತೆಗೆ 50 ಸಾವಿರ ರೂ. ನಗದನ್ನೂ ಕಳವು ಮಾಡಲಾಗಿದೆ.

ದಂಪತಿ ತಮ್ಮ ಮಗುವಿಗೆ ಬಟ್ಟೆ ಖರೀದಿಸಲು ಮನೆಯಿಂದ ಹೊರಗೆ ತೆರಳಿದ್ದರು. ವಾಪಸ್ ಮನೆಗೆ ಬಂದಾಗ ಹಿಂಬಾಗಿಲಿನ ಬೀಗ ಒಡೆದಿರುವುದು ಕಂಡು ಆತಂಕಗೊಂಡಿದ್ದಾರೆ. ಬಳಿಕ ಮನೆಯೊಳಗೆ ಪರಿಶೀಲಿಸಿದಾಗ ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಮುರಿದಿರುವುದು ಗೊತ್ತಾಗಿದೆ. ಸುಮಾರು 118 ಸವರನ್ ಚಿನ್ನ ಮತ್ತು ವಜ್ರದ ಆಭರಣಗಳ ಜತೆಗೆ 50 ಸಾವಿರ ರೂಪಾಯಿ ನಗದು ಕಳವಾಗಿರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳವಾಗಿರುವ ಚಿನ್ನ, ವಜ್ರದ ಆಭರಣ ಹಾಗೂ ಹಣದ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ ಎಂದು ತಿಳಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಜಕ್ಕಮಂಗಲಂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದ ವಿಐಪಿ ಗಾರ್ಡನ್ ನಿವಾಸದ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಳ್ಳರ ಓಡಾಟದ ಕುರಿತು ಸುಳಿವು ಸಂಗ್ರಹಿಸುತ್ತಿದ್ದಾರೆ.

ಕಳ್ಳತನ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಹೆಚ್ಚಿನ ಜನಸಂಖ್ಯೆ ಇರುವ ವಸತಿ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ಹಾಗೂ ಆಭರಣ ಕಳವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರದೇಶದ ಭದ್ರತೆ ಬಗ್ಗೆಯೂ ಭಯಕ್ಕೆ ಕಾರಣವಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *