ಪುತ್ತೂರು: ಗುಡ್ಡದಲ್ಲಿ ನಿರ್ಮಾಣಗೊಂಡಿರುವ ಸೇವಾ ಕೇಂದ್ರದ ಕಟ್ಟಡದ ಕುರಿತು ಪತ್ರಿಕಾಗೋಷ್ಠಿ

ಪುತ್ತೂರು: ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಮೂಲಕ ಪುತ್ತೂರಿನ ಸಿಟಿಒ ಗುಡ್ಡದಲ್ಲಿ ನಿರ್ಮಾಣಗೊಂಡಿರುವ ಸೇವಾ ಕೇಂದ್ರದ ಕಟ್ಟಡದ ಕುರಿತು ಎಸ್.ಡಿ.ಪಿ.ಐ, ಬಿಜೆಪಿಯು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕಾರ್ಯ ಮಾಡುತ್ತಿದ್ದು, ದೂರದೂರಿಗಳಿಂದ ಶಿಕ್ಷಣಕ್ಕಾಗಿ ಪುತ್ತೂರಿಗೆ ಬರುವ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಟ್ಟಡದಲ್ಲಿ ಹಾಸ್ಟೆಲ್ ಆರಂಭಿಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಹೇಳಿದರು.
ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯಾವುದೋ ಒಂದು ಗುಡ್ಡ ಪ್ರದೇಶದಲ್ಲಿ ಜನರಿಗೆ ಹೋಗಿ ಬರಲು ಕಷ್ಟವಾಗುವ ರೀತಿ ಸೇವಾ ಕೇಂದ್ರವನ್ನು ತೆರೆಯುವುದು ಮೂರ್ಖತನದ ಕಾರ್ಯವಾಗಿದ್ದು, ಅಲ್ಲಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಮಾಡಿದ ಅಧಿಕಾರಿಗಳಿಗಾದರೂ ಕೊಂಚ ಕಾಮನ್ ಸೆನ್ಸ್ ಬೇಕಿತ್ತು. ಸೇವಾ ಕೇಂದ್ರಗಳನ್ನು ಎಲ್ಲೆಲ್ಲೋ ನಿರ್ಮಿಸಿ ಜನರಿಗೆ ತೊಂದರೆ ಕೊಡುವ ಕಾರ್ಯ ಮಾಡಬಾರದು.


ಪುತ್ತೂರಿನ ತಾ.ಪಂ.ಕಟ್ಟಡದ ಒಂದು ಕೊಠಡಿಯಲ್ಲಿ ಈಗಾಗಲೇ ಸೇವಾ ಕೇಂದ್ರ ಕಾರ್ಯಾಚರಿಸುತ್ತಿದ್ದು, ಸಾಕಷ್ಟು ಮಂದಿ ಫಲಾನುಭವಿಗಳು, ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಸೌಲಭ್ಯ, ಮಾಹಿತಿ ಪಡೆಯುವ ಜತೆಗೆ ಅರ್ಜಿ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾರೆ. ಆ ಕಟ್ಟಡದಲ್ಲಿ ಸೇವಾ ಕೇಂದ್ರ ಮಾಡಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಪಸಂಖ್ಯಾಕ ಮುಖಂಡರು ಅಲ್ಲಿ ಪರಿಶೀಲನೆ ನಡೆಸಿ ಶಾಸಕ ಅಶೋಕ್ ರೈಗಳಿಗೆ ವಿಚಾರವನ್ನು ತಿಳಿಸಿ ಅವರು ಸಚಿವ ಝಮೀರ್ ಅಹಮ್ಮದ್ ಅವರ ಮೂಲಕ ಪುತ್ತೂರಿಗೆ ಅಗತ್ಯವಾಗಿ ಬೇಕಿರುವ ಹಾಸ್ಟೆಲ್ ವ್ಯವಸ್ಥೆ ಮಾಡಲು ಸಿದ್ಧತೆಯನ್ನು ಆರಂಭಿಸಿದ್ದಾರೆ.
ಪುತ್ತೂರಿನಲ್ಲಿ ಈ ಹಿಂದೆ ಸಾಲ್ಮರ ಗುಡ್ಡದಲ್ಲಿ ನಿರ್ಮಾಣಗೊಂಡ ಮೌಲಾನಾ ಅಝಾದ್ ಶಾಲೆಗೆ ನೀರಿನ ವ್ಯವಸ್ಥೆ, ರಸ್ತೆ ಸಂಪರ್ಕ ಇಲ್ಲವಾಗಿದ್ದು, ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿ ಕೂಡ ಸಾಮಾನ್ಯ ಜನರಿಗೆ ತೊಂದರೆಯಾಗುವ ಜಾಗದಲ್ಲೇ ನಿರ್ಮಾಣಗೊಂಡಿದೆ. ಪ್ರಸ್ತುತ ರಾಜಕೀಯ ಉದ್ದೇಶದ ಕಾರಣಕ್ಕೆ ಅಲ್ಪಸಂಖ್ಯಾಕರ ಸೇವಾ ಕೇಂದ್ರದ ಕಟ್ಟಡದ ಕುರಿತು ಗೊಂದಲ ಸೃಷ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾಕರ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಪ್ರಮುಖರಾದ ಶಕೂರ್ ಹಾಜಿ, ವಿಲ್ಫ್ರೆಡ್ ಫೆರ್ನಾಂಡೀಸ್, ಯಾಕೂಬ್ ಮುಲಾರ್, ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *