ತುಳುವಿಗೆ ಅಧಿಕೃತ ರಾಜ್ಯಭಾಷೆ ಸ್ಥಾನಮಾನ: ನಿರಂತರ ಹೋರಾಟಕ್ಕೆ ಫಲದ ನಿರೀಕ್ಷೆ-ಕಡತ ಯಜ್ಞದಲ್ಲಿ ಭಗೀರಥ ಪ್ರಯತ್ನ ಮಾಡಿದ ಜಿ.ವಿ.ಎಸ್. ಉಳ್ಳಾಲ್

2023ರ ನವೆಂಬರ್‌ನಿಂದ ವಿಧಾನಸೌಧ–ವಿಕಾಸಸೌಧದ ಕಚೇರಿಗಳ ಸುತ್ತ ನಿರಂತರ ಓಡಾಟ | ನಾಲ್ಕು ಕಡತಗಳ ಪೈಕಿ ಮೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ, ಅಂತಿಮ ಕಡತವೂ ರವಾನೆ

ಮಂಗಳೂರು: ಕರ್ನಾಟಕದಲ್ಲಿ ತುಳು ಭಾಷೆಗೆ ‘ಹೆಚ್ಚುವರಿ ಅಧಿಕೃತ ಭಾಷೆ’ ಸ್ಥಾನಮಾನ ಕಲ್ಪಿಸುವ ಬಹು ವರ್ಷಗಳ ಬೇಡಿಕೆ ಇದೀಗ ಮಹತ್ವದ ಹಂತ ತಲುಪಿದೆ. ತುಳು ಭಾಷೆಯ ಸಾಂಸ್ಥಿಕ ಬೆಳವಣಿಗೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಸಂಘಟನೆಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಆಡಳಿತಾತ್ಮಕ ಕಡತ ವಿಲೇವಾರಿಗೆ ವೇಗ ನೀಡುವಲ್ಲಿ ನಮ್ಮ ತುಳುನಾಡು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ಜಿ.ವಿ.ಎಸ್. ಉಳ್ಳಾಲ್ (ಸುಧಾಕರ ಶೆಟ್ಟಿ) ಅವರ ನಿರಂತರ ಪ್ರಯತ್ನ ಪ್ರಮುಖವಾಗಿ ಗಮನ ಸೆಳೆದಿದೆ.

ಜಿ.ವಿ.ಎಸ್. ಉಳ್ಳಾಲ್ ಅವರ 410ಕ್ಕೂ ಅಧಿಕ ದಿನಗಳ ಓಡಾಟ

ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆ ಸ್ಥಾನಮಾನ ದೊರಕಬೇಕು ಎಂಬ ಉದ್ದೇಶದಿಂದ 2023ರ ನವೆಂಬರ್‌ನಿಂದ ಜಿ.ವಿ.ಎಸ್. ಉಳ್ಳಾಲ್ ಅವರು ವಿಧಾನಸೌಧ ಮತ್ತು ವಿಕಾಸಸೌಧ ಮಟ್ಟದಲ್ಲಿ ಕಡತಗಳ ಬೆನ್ನುಬಿದ್ದು ನಿರಂತರ ಪ್ರಯತ್ನ ನಡೆಸಿದ್ದಾರೆ. ಶಾಸಕ ಅಶೋಕ್ ರೈ ಅವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಅಗತ್ಯ ದಾಖಲೆಗಳನ್ನು ಒಗ್ಗೂಡಿಸಿ ಕಡತ ವಿಲೇವಾರಿಗೆ ವೇಗ ನೀಡುವ ಪ್ರಯತ್ನ ನಡೆದಿದೆ.

ಸುಮಾರು 410ಕ್ಕೂ ಹೆಚ್ಚು ದಿನಗಳ ಕಾಲ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ಸರ್ಕಾರಿ ಕಚೇರಿಗಳಿಗೆ ತೆರಳಿ, ಕಡತಗಳ ಪ್ರಗತಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿ, ಸಂಬಂಧಪಟ್ಟ ಹಂತಗಳಲ್ಲಿ ಪ್ರಕ್ರಿಯೆ ಮುಂದುವರಿಯುವಂತೆ ಜಿ.ವಿ.ಎಸ್. ಉಳ್ಳಾಲ್ ಅವರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಪ್ರಮುಖ ಕಡತಗಳಿದ್ದು, ಈಗಾಗಲೇ ಮೂರು ಕಡತಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ತಲುಪಿವೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ನಾಲ್ಕನೇ ಹಾಗೂ ಅಂತಿಮ ಕಡತವನ್ನು ಆರ್ಥಿಕ ಇಲಾಖೆಯಿಂದ ಮುಖ್ಯ ಇಲಾಖೆಗೆ ರವಾನಿಸುವ ಕಾರ್ಯವೂ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

ಪಕ್ಷಾತೀತವಾಗಿ ತುಳುವಿಗಾಗಿ ನಿರಂತರ ಕಾರ್ಯ

ರಾಜಕೀಯ ಪಕ್ಷಗಳ ಗಡಿ ಮೀರಿ, ತುಳು ಭಾಷೆ ಮತ್ತು ತುಳುನಾಡಿನ ಹಿತವನ್ನು ಕೇಂದ್ರವಾಗಿಟ್ಟುಕೊಂಡು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ವಿ.ಎಸ್. ಉಳ್ಳಾಲ್ ಅವರು ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ತುಳುಪರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ತುಳುವಿಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಲ್ಲದೆ, ತುಳು ಭಾಷೆಯ ಹಕ್ಕು ಮತ್ತು ತುಳುವರ ಬಹುದಿನಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಆಡಳಿತಾತ್ಮಕ ಹಂತದಲ್ಲಿ ನಿರಂತರವಾಗಿ ಕೆಲಸ ಮಾಡಿರುವುದು ಅವರ ಪ್ರಯತ್ನದ ಪ್ರಮುಖ ಅಂಶವಾಗಿದೆ.

ಕೇವಲ ಹೋರಾಟವಲ್ಲ, ಕಡತ ವಿಲೇವಾರಿಯಲ್ಲೂ ನಿರಂತರ ಹಸ್ತಕ್ಷೇಪ

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಬೀದಿ ಹೋರಾಟ, ಮನವಿ, ಸಭೆ ಹಾಗೂ ಅಭಿಯಾನಗಳು ನಡೆಯುತ್ತಿರುವ ನಡುವೆಯೇ, ಸರ್ಕಾರಿ ಆಡಳಿತ ವ್ಯವಸ್ಥೆಯೊಳಗಿನ ಕಡತ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡು ಅದರ ಪ್ರತಿಯೊಂದು ಹಂತದ ಮೇಲೆ ನಿಗಾ ಇಡುವ ಕೆಲಸದಲ್ಲಿ ಜಿ.ವಿ.ಎಸ್. ಉಳ್ಳಾಲ್ ಅವರ ಪಾತ್ರ ಗಮನಾರ್ಹವಾಗಿದೆ.

ತುಳು ಭಾಷೆಗೆ ಸಂಬಂಧಿಸಿದ ದಾಖಲೆಗಳು, ಹಿಂದಿನ ವರದಿಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಒಗ್ಗೂಡಿಸಿ, ಸಂಬಂಧಪಟ್ಟ ಇಲಾಖೆಗಳ ಮಟ್ಟದಲ್ಲಿ ವಿಚಾರವನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ.

ಅಕಾಡೆಮಿಯ ಹೋರಾಟಕ್ಕೆ ಮುಂದುವರಿದ ಹೆಜ್ಜೆ

ತುಳುವಿಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ಬೇಡಿಕೆಗೆ 2021ರ ಆಗಸ್ಟ್ 9ರಂದು ನಡೆದ ಉನ್ನತ ಮಟ್ಟದ ಸಭೆ ಮಹತ್ವದ ತಿರುವು ನೀಡಿತ್ತು. ಅಂದಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರು ತುಳುವಿನ ಇತಿಹಾಸ, ಲಿಪಿ ಪರಂಪರೆ ಹಾಗೂ ಸಂವಿಧಾನದ ಸಂಬಂಧಿತ ವಿಧಿಗಳ ಆಧಾರದಲ್ಲಿ ಸರ್ಕಾರದ ಮುಂದೆ ವಾದ ಮಂಡಿಸಿದ್ದರು. ಅಕಾಡೆಮಿ ಸದಸ್ಯ ಡಾ. ಆಕಾಶರಾಜ್ ಜೈನ್ ಅವರೂ ಸಕ್ರಿಯ ಬೆಂಬಲ ನೀಡಿದ್ದರು.

ಹಿಂದಿನ ಅಧ್ಯಕ್ಷರು ಹಾಕಿಕೊಟ್ಟ ಬುನಾದಿಯ ಮುಂದುವರಿದ ಭಾಗವಾಗಿ, ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರ ನೇತೃತ್ವದಲ್ಲಿಯೂ ಸರ್ಕಾರದ ಮಟ್ಟದಲ್ಲಿ ನಿಯೋಗಗಳು, ಸಚಿವರು, ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳ ಭೇಟಿಗಳ ಮೂಲಕ ಪ್ರಕ್ರಿಯೆಗೆ ವೇಗ ನೀಡುವ ಪ್ರಯತ್ನ ನಡೆದಿದೆ.

ಮೋಹನ್ ಆಳ್ವ ಸಮಿತಿ ವರದಿಯೂ ಪ್ರಮುಖ ದಾಖಲೆ

ಹಿಂದಿನ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಡಾ. ಎಂ. ಮೋಹನ ಆಳ್ವ ಅವರ ನೇತೃತ್ವದ ಸಮಿತಿ ವರದಿಯೂ ಸಿದ್ಧವಾಗಿತ್ತು. ಆದರೆ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಧಿಕೃತ ಸ್ಥಾನಮಾನ ಘೋಷಣೆ ಆಗಿರಲಿಲ್ಲ.

ಆಂಧ್ರಪ್ರದೇಶದ ಭಾಷಾ ನೀತಿಯ ಅಧ್ಯಯನ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಮ್ಮ ತುಳುನಾಡು ಟ್ರಸ್ಟ್, ಸ್ಪೀಕರ್ ಯು.ಟಿ. ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ತುಳು ಭಾಷೆಗೆ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಮಾನ್ಯತೆ ದೊರಕಿಸುವ ಪ್ರಯತ್ನ ಮುಂದುವರಿಯಿತು.

ತುಳು ಭಾಷೆಗೆ ಸಂಬಂಧಿಸಿದ ಆಡಳಿತಾತ್ಮಕ ಮಾನ್ಯತೆಯ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲಿನ ಭಾಷಾ ನೀತಿಯ ಅಧ್ಯಯನವನ್ನೂ ನಡೆಸಲಾಯಿತು. ಈ ಕಾರ್ಯಕ್ಕೆ ಶಾಸಕ ಅಶೋಕ್ ರೈ ಸಹಕಾರ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಬಹುದಿನಗಳ ಕನಸು ನನಸಾಗುವ ಹೊಸ್ತಿಲಲ್ಲಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನಮ್ಮ ತುಳುನಾಡು ಟ್ರಸ್ಟ್, ಜೈ ತುಳುನಾಡು, ತುಳು ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ತುಳು ಅಭಿಮಾನಿಗಳ ಹಲವು ವರ್ಷಗಳ ಪ್ರಯತ್ನ ಇದೀಗ ನಿರ್ಣಾಯಕ ಹಂತ ತಲುಪಿದೆ.

ಈ ಪ್ರಕ್ರಿಯೆಯಲ್ಲಿ ಜಿ.ವಿ.ಎಸ್. ಉಳ್ಳಾಲ್ ಅವರು ನಡೆಸಿದ ದೀರ್ಘಕಾಲದ ಕಡತ ಹೋರಾಟ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕಡತಗಳು ಇಲಾಖೆಯಿಂದ ಇಲಾಖೆಗೆ ಸಾಗುವ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ನಿರಂತರವಾಗಿ ಬೆನ್ನುಬಿದ್ದು, ಬೆಂಗಳೂರಿನಲ್ಲಿ ನೂರಾರು ದಿನಗಳ ಕಾಲ ಓಡಾಟ ನಡೆಸಿರುವ ಅವರ ಪ್ರಯತ್ನಕ್ಕೆ ಇದೀಗ ಫಲ ದೊರೆಯುವ ನಿರೀಕ್ಷೆ ಮೂಡಿದೆ.

ಸಚಿವ ಸಂಪುಟದ ಅಧಿಕೃತ ಘೋಷಣೆಯ ಬಳಿಕ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕಿದ್ದು, ಇದಕ್ಕೂ ಸಂಘಟನೆಗಳು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ” ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ನಮ್ಮ ತುಳುನಾಡು ಟ್ರಸ್ಟ್‌ನ ಅಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್ (ಸುಧಾಕರ ಶೆಟ್ಟಿ) ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *