ಮಂಗಳೂರು: ಬ್ಲಿಂಕ್‌ಇಟ್‌ ಗೋಡೌನ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿ ನೋಟಿಸ್

ಮಂಗಳೂರು: ಆನ್‌ಲೈನ್‌ ಸಾಮಗ್ರಿಗಳ ಮಾರಾಟ ಸಂಸ್ಥೆ ಬ್ಲಿಂಕ್‌ಇಟ್‌ (Blinkit) ಮೂಲಕ ಗ್ರಾಹಕರಿಗೆ ಒಡೆದ ಹಾಗೂ ಹುಳುಬಿದ್ದ ಮೊಟ್ಟೆಗಳನ್ನು ಸರಬರಾಜು ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಪಳ್ನೀರ್‌ನಲ್ಲಿರುವ ಬ್ಲಿಂಕ್‌ಇಟ್‌ ಗೋಡೌನ್‌ಗೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಹಕರೊಬ್ಬರು ಬ್ಲಿಂಕ್‌ಇಟ್‌ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ಮೊಟ್ಟೆಗಳನ್ನು ಖರೀದಿಸಿದ್ದು, ಅವುಗಳಲ್ಲಿ ಕೆಲವು ಒಡೆದಿದ್ದವು ಹಾಗೂ ಹುಳುಬಿದ್ದ ಮೊಟ್ಟೆಗಳು ಪತ್ತೆಯಾಗಿದ್ದವು ಎಂದು ದೂರು ನೀಡಿದ್ದರು. ಈ ಕುರಿತು ಗ್ರಾಹಕರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ನೇರವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಕ್ರಮ ಕೈಗೊಂಡಿದೆ.

ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಪಳ್ನೀರ್‌ನಲ್ಲಿರುವ ಸ್ವಾರ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲಿಂಕ್‌ಇಟ್‌ ಸಂಸ್ಥೆಯ ಸಂಗ್ರಹಣಾ ಕೇಂದ್ರಕ್ಕೆ ದಾಳಿ ನಡೆಸಿತು.

ಪರಿಶೀಲನೆ ವೇಳೆ ಒಡೆದ ಮೊಟ್ಟೆಗಳ ಪ್ಯಾಕೆಟ್‌ ಪತ್ತೆ

ದಾಳಿ ವೇಳೆ ಅಧಿಕಾರಿಗಳು ಗೋಡೌನ್‌ನಲ್ಲಿ ಪರಿಶೀಲನೆ ನಡೆಸಿದ್ದು, ಒಡೆದ ಮೊಟ್ಟೆಗಳಿದ್ದ ಕೆಲವು ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಅಲ್ಲದೆ, ಗೋಡೌನ್‌ನ ಸಂಗ್ರಹಣಾ ಪ್ರದೇಶದಲ್ಲಿ ಶುಚಿತ್ವದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಕೋಣೆಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿಸಿ ಸೀಲ್ ಮಾಡಿದ್ದಾರೆ.

ಸಂಗ್ರಹಣಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲಿಂಕ್‌ಇಟ್‌ಗೆ ನೋಟಿಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಿಂಕ್‌ಇಟ್‌ ಸಂಸ್ಥೆಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಕಂಡುಬಂದಿರುವ ಲೋಪಗಳ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಿದೆ.

ಗ್ರಾಹಕರಿಗೆ ಆಹಾರ ಸಾಮಗ್ರಿಗಳನ್ನು ಸುರಕ್ಷಿತ ಹಾಗೂ ಗುಣಮಟ್ಟದ ಸ್ಥಿತಿಯಲ್ಲಿ ತಲುಪಿಸುವುದು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಂಗ್ರಹಣೆ ಮತ್ತು ಆಹಾರ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *