ಪುತ್ತೂರು:ಪುತ್ತೂರಿನ ದರ್ಬೆಯ ಗ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ಲ್ಯಾಮಿನೇಷನ್‌ಗೆ ನೀಡಿದ್ದ ದಾಖಲಾತಿಯೊಂದಕ್ಕೆ ತಾಂತ್ರಿಕ ದೋಷದಿಂದ ಹಾನಿಯಾದ ವಿಚಾರಕ್ಕೆ ಸಂಬಂಧಿಸಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಾಗಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇನ್ನೋರ್ವ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್.ಪೈ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.


ಸುಳ್ಯ ತಾಲೂಕಿನ ಜಾಲ್ಲೂರು ನಿವಾಸಿ -ತಿಮತ್ ಮಿಸ್ವಾನ್(32ವ.)ಎಂಬವರು ನೀಡಿದ ದೂರಿನಲ್ಲಿ,’ಆ.21ರಂದು ತನ್ನ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ವೇಳೆ, ಕೆಲವು ದಾಖಲಾತಿಗಳ ಪ್ರಿಂಟ್ ಹಾಗೂ ಲ್ಯಾಮಿನೇಷನ್ ಮಾಡಿಸಲೆಂದು ದರ್ಬೆಯ ಗ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರಕ್ಕೆ ನೀಡಿದ್ದು ಬಳಿಕ ದಾಖಲಾತಿಗಳನ್ನು ವಾಪಸ್ ಪಡೆಯಲು ಹೋದಾಗ,ಅವುಗಳ ಪೈಕಿ ಒಂದು ದಾಖಲಾತಿ ಹುಡಿಯಾಗಿರುವುದನ್ನು ಗಮನಿಸಿ,ಅದನ್ನು ಸರಿಪಡಿಸಿಕೊಡಬೇಕು ಅಥವಾ ಹೊಸ ದಾಖಲಾತಿ ಪಡೆಯಲು ರೂ.300 ನೀಡಬೇಕು ಎಂದು ಕೇಳಿದ್ದೆವು.
ಈ ವಿಚಾರದಲ್ಲಿ ಅಂಗಡಿಯಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವರು ಅವಾಚ್ಯವಾಗಿ ಬೈದಿದ್ದು,ಸುದರ್ಶನ ಪೈ ಅವರು ನನಗೆ ಹಾಗೂ ಸಹೋದರ, ತಂಗಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದರು.ಈ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 352, 115(2), 109 ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್ ಪೈ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದೇ ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್.ಪೈ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡ್, ನಿಶಾ ಕುಮಾರಿ ವಾದಿಸಿದ್ದರು.


