ಏಳು ಶವಗಳ ಸಾಗಾಟಕ್ಕೆ ‘PRESS’ ಅಸ್ತ್ರ! ಪತ್ರಕರ್ತರ ಸೋಗಿನಲ್ಲಿ ಪೊಲೀಸರ ಕಣ್ತಪ್ಪಿಸಿದ ಆರೋಪಿ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಏಳು ಮಂದಿಯ ಹತ್ಯೆ ಹಾಗೂ ಶವಗಳ ನಿಗೂಢ ವಿಲೇವಾರಿ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್, ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಕರ್ತರ ಸೋಗು ಹಾಕಿಕೊಂಡಿದ್ದ ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲಾಗಿದೆ.

ಶವಗಳನ್ನು ಸಾಗಿಸಲು ಆರೋಪಿ ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರನ್ನು ಬಳಸಿಕೊಂಡಿದ್ದ ಎನ್ನಲಾಗಿದೆ. ಮಾರ್ಗಮಧ್ಯೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಾರನ್ನು ತಡೆದು ಪರಿಶೀಲಿಸದಂತೆ ನೋಡಿಕೊಳ್ಳಲು ಕಾರಿನ ಮುಂಭಾಗದ ಗಾಜಿನ ಮೇಲೆ ‘PRESS’ ಎಂಬ ಚಿಹ್ನೆಯನ್ನು ಅಳವಡಿಸಿಕೊಂಡಿದ್ದನು.

ಇದಷ್ಟೇ ಅಲ್ಲದೆ, ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರವಾಸ ಎಂದು ಬರೆಸಿದ ದೊಡ್ಡ ಬ್ಯಾನರ್‌ವೊಂದನ್ನು ಸಿದ್ಧಪಡಿಸಿ ಕಾರಿನ ನಂಬರ್ ಪ್ಲೇಟ್ ಕಾಣದಂತೆ ಅಡ್ಡಲಾಗಿ ಕಟ್ಟಿಕೊಂಡಿದ್ದನು. ಪತ್ರಕರ್ತರ ಹೆಸರಿನಲ್ಲಿ ಪ್ರಯಾಣಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಆತನ ಲೆಕ್ಕಾಚಾರವಾಗಿತ್ತು.

ದಾರಿಯಲ್ಲಿ ಯಾರಾದರೂ ಕಾರನ್ನು ತಡೆದು ಪ್ರಶ್ನಿಸಿದರೆ, ತನ್ನ ಬಳಿ ಇಟ್ಟುಕೊಂಡಿದ್ದ ಠಾಣಾ ವರದಿಯ ಪತ್ರಿಕೆ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿ ತಾನು ಪತ್ರಕರ್ತ ಎಂದು ಪರಿಚಯಿಸಿಕೊಳ್ಳುತ್ತಿದ್ದನು. ಈ ಮೂಲಕ ಪೊಲೀಸರ ಅನುಮಾನಕ್ಕೆ ಸಿಲುಕದೆ ಪ್ರಯಾಣ ಮುಂದುವರಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಸಕಲೇಶಪುರ ಘಾಟಿಯಿಂದ ಮಂಗಳೂರಿನವರೆಗೆ ಸಂಚಾರ!

ಈ ಹಿಂದೆ ನಡೆದ ಸರಣಿ ಹತ್ಯೆ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಕೊಂದು, ಶವಗಳನ್ನು ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿ ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಯತ್ನಿಸಿದ್ದರು ಎನ್ನಲಾಗಿದೆ. ಒಂದೇ ಬಾರಿಗೆ ಶವಗಳನ್ನು ಸಾಗಿಸಿದರೆ ಪೊಲೀಸರಿಗೆ ಸಿಕ್ಕಿಬೀಳುವ ಸಾಧ್ಯತೆ ಇರುವುದರಿಂದ ಹಂತ ಹಂತವಾಗಿ ಸಾಗಿಸುವ ತಂತ್ರ ರೂಪಿಸಲಾಗಿತ್ತು.

ಇದೇ ತಂತ್ರದ ಭಾಗವಾಗಿ ಆರೋಪಿ ಇಂದುಶೇಖರ್ ಪತ್ರಕರ್ತರ ಪ್ರವಾಸದ ಬ್ಯಾನರ್ ಅಳವಡಿಸಿಕೊಂಡು ಸಕಲೇಶಪುರ ಘಾಟಿ, ಮಂಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಚರಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ರಾಜ್ಯದ ಇತರ ಭಾಗಗಳಲ್ಲಿಯೂ ಇದೇ ರೀತಿಯ ತಂತ್ರ ಬಳಸಿ ಶವಗಳನ್ನು ಸಾಗಿಸಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಪ್ರಕರಣದ ಹಿಂದಿನ ಸಂಪೂರ್ಣ ಜಾಲ ಹಾಗೂ ಇತರ ಸಂಗತಿಗಳನ್ನು ಪತ್ತೆಹಚ್ಚಲು ವಿಚಾರಣೆ ಮುಂದುವರಿದಿದೆ

Star Of Kudla

Learn More →

Leave a Reply

Your email address will not be published. Required fields are marked *