ಉಡುಪಿ: ಹಾನಿಕಾರಕ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸುವ ಜಾಲ ಪತ್ತೆ, 10890 ಕೆಜಿ ಹಣ್ಣು ನಾಶ

ಉಡುಪಿ: ಬಾಳೆಕಾಯಿಗಳನ್ನು ತ್ವರಿತವಾಗಿ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ  ಅಲೆವೂರು ಗ್ರಾಮದ ಹಲವು ಪ್ರದೇಶಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅಲೆವೂರು ಗ್ರಾಮದ ಕೆಮ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಲಿ ಪರಿಸರದಲ್ಲಿರುವ ಬಾಳೆಹಣ್ಣು ವ್ಯಾಪಾರಿಗಳ ಮೂರು ಗೋದಾಮುಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸಿದೆ.

ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲೆ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಂದ ಬಂದ ಮಾಹಿತಿ ಹಾಗೂ ದೂರುಗಳ ಆಧಾರದ ಮೇಲೆ ಈ ತಪಾಸಣೆ ನಡೆಸಲಾಗಿದೆ.

ಬಾಳೆ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಕೆ

ಬಾಳೆ ಕಾಯಿಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುತ್ತಿದ್ದ ಹಾನಿಕಾರಕ ರಾಸಾಯನಿಕಗಳು ದಾಳಿಯ ವೇಳೆ ಪತ್ತೆಯಾಗಿವೆ. ಇಂಡೋಥ್ರೆಲ್ ಸೇರಿದಂತೆ ರಾಸಾಯನಿಕ ಪದಾರ್ಥಗಳು ಹಾಗೂ ಹಣ್ಣುಗಳಿಗೆ ಕೃತಕ ಬಣ್ಣ ನೀಡಲು ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಸಾಯನಿಕಗಳನ್ನು ಬಳಕೆ ಮಾಡಲು ಬಳಸುತ್ತಿದ್ದ ಪರಿಕರಗಳನ್ನೂ ಪತ್ತೆಹಚ್ಚಲಾಗಿದೆ.

8.71 ಲಕ್ಷ ರೂ. ಮೌಲ್ಯದ ಬಾಳೆಹಣ್ಣು ನಾಶ

ಒಟ್ಟು 10,890 ಕೆಜಿ ಬಾಳೆಹಣ್ಣುಗಳು ರಾಸಾಯನಿಕ ಬಳಕೆಗೆ ಒಳಗಾಗಿರುವುದು ಪತ್ತೆಯಾಗಿದ್ದು, ಇವುಗಳ ಅಂದಾಜು ಮೌಲ್ಯ 8.71 ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ವಶಪಡಿಸಿಕೊಂಡ ಹಣ್ಣುಗಳನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ನಾಶಪಡಿಸಲಾಗಿದೆ.

ಇದರ ಜೊತೆಗೆ ರಾಸಾಯನಿಕ ಬಳಕೆಗೆ ಸಂಬಂಧಿಸಿದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಾಹನಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.

Star Of Kudla

Learn More →

Leave a Reply

Your email address will not be published. Required fields are marked *