TC ನೀಡಿ ಶಾಲೆಯಿಂದ ವಜಾ; ದ್ವೇಷಕ್ಕೆ ಪ್ರಾಂಶುಪಾಲೆಯನ್ನೇ ಹತ್ಯೆಗೈದ 10ನೇ ತರಗತಿ ವಿದ್ಯಾರ್ಥಿಗಳು

ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿ ಮಂಡಲ ಕೇಂದ್ರದಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಕೆ. ರೂಪಾ ರೆಡ್ಡಿ ಅವರ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದ್ದು, ಅವರು ನಡೆಸುತ್ತಿದ್ದ ಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳೇ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ವರ್ಗಾವಣೆ ಪ್ರಮಾಣಪತ್ರ (TC) ನೀಡಿ ಶಾಲೆಯಿಂದ ವಜಾಗೊಳಿಸಿದ್ದಕ್ಕಾಗಿ ಆಕ್ರೋಶಗೊಂಡಿದ್ದ ವಿದ್ಯಾರ್ಥಿ, ರೂಪಾ ರೆಡ್ಡಿ ಅವರ ವಿರುದ್ಧ ತೀವ್ರ ದ್ವೇಷ ಹೊಂದಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗಸ್ಟ್ 11 ರಂದು ಮುಖವಾಡ ಹಾಗೂ ಹೂಡಿ ಧರಿಸಿದ್ದ ಇಬ್ಬರು ವಿದ್ಯಾರ್ಥಿಗಳು ರೂಪಾ ರೆಡ್ಡಿ ಅವರ ಮನೆಗೆ ತೆರಳಿದ್ದರು. ಒಬ್ಬ ವಿದ್ಯಾರ್ಥಿ ಮನೆಗೆ ನುಗ್ಗಿ ಹಣ ನೀಡುವಂತೆ ಬೆದರಿಕೆ ಹಾಕಿದಾಗ ಪ್ರಾಂಶುಪಾಲೆ ವಿರೋಧಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮುಖವಾಡ ಕಳಚಿ ಬಿದ್ದಾಗ, ವಿದ್ಯಾರ್ಥಿಯನ್ನು ಗುರುತಿಸಿದ ರೂಪಾ ರೆಡ್ಡಿ ಕಿರುಚಾಡಿದ್ದಾರೆ. ತನ್ನ ಗುರುತು ಸಿಕ್ಕಿಬೀಳುವ ಭಯದಿಂದ ವಿದ್ಯಾರ್ಥಿಯು ತಂದಿದ್ದ ಚಾಕುವಿನಿಂದ ಆಕೆಗೆ ಇರಿದು ಕೊಲೆ ಮಾಡಿದ್ದಾನೆ.

ಕೊಲೆಯ ನಂತರ ಮನೆಯಲ್ಲಿದ್ದ ₹2.20 ಲಕ್ಷ ನಗದನ್ನು ದೋಚಿದ ಆರೋಪಿ, ಹೊರಗಡೆ ಕಾಯುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಗೆ ₹40,000 ನೀಡಿದ್ದಾನೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕಿತ ವಿದ್ಯಾರ್ಥಿಯ ಜೇಬಿನಲ್ಲಿದ್ದ ರಕ್ತದ ಕಲೆಯಾಗಿದ್ದ ₹1.60 ಲಕ್ಷ ನಗದನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಇಬ್ಬರೂ ಸತ್ಯ ಒಪ್ಪಿಕೊಂಡಿದ್ದಾರೆ. ಇಬ್ಬರು ಬಾಲಕರನ್ನು ಪೊಲೀಸರು ಪ್ರಸ್ತುತ ವಶಕ್ಕೆ ಪಡೆದಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *