ಕಾಪು: ಖಾಸಗಿ ಬಸ್ಸೊಂದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆ.14 ರಂದು ಬೆಳಗ್ಗೆ ಕಾಪು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಖಾಸಗಿ ವೇಗದೂತ ಆನಂದ್ ಹೆಸರಿನ ಬಸ್ಸಿನಲ್ಲಿ ಅದರ ಚಾಲಕ ಹಾಗೂ ನಿರ್ವಾಹಕನು ಬಸ್ಸಿನ ಪರವಾನಿಗೆ ನಿಭಂದನೆಯನ್ನು ಉಲ್ಲಂಘನೆ ಮಾಡಿ ಬಸ್ಸಿನಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರು ವುದು ಕಂಡುಬಂದಿದೆ.
ಅಲ್ಲದೆ ಬಸ್ಸಿನ ಫುಟ್‌ಬೋಡಿನಲ್ಲಿ ಅಪಾಯಕಾರಿಯಾಗಿ ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರನ್ನು ನೇತಾಡುವ ಸ್ಥಿತಿಯಲ್ಲಿ ಪ್ರಯಾಣಿಸಿದ್ದಾರೆ. ಅದೇ ರೀತಿ ಪ್ರಯಾಣಿಕರ ಸುರಕ್ಷತೆಯನ್ನು ಆಲಕ್ಷಿಸಿ ಅವರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


