‘ಮಾಟಮಂತ್ರ’ದ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತೀವ್ರ ಆತಂಕಕಾರಿ: ಸುಪ್ರೀಂ ಕೋರ್ಟ್

‘ಮಾಟಮಂತ್ರ’ ಅಥವಾ ‘ಭಾಟಂಗಿ’ಯ ಹೆಸರಿನಲ್ಲಿ ಮಹಿಳೆಯರನ್ನು ಸಂಕಷ್ಟಕ್ಕೆ ಈಡುಮಾಡುವುದು ಹಾಗೂ ಅವರ ಮೇಲೆ ದೌರ್ಜನ್ಯ ಎಸಗುವುದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಡುಪೂರ್ವಗ್ರಹದ ಸಂಕೇತವಾಗಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸಮಸ್ಯೆಗೆ ನೈಜ ಪರಿಹಾರಗಳನ್ನು ಕಂಡುಕೊಳ್ಳುವ ಬದಲು ಬಲಿಪಶುಗಳನ್ನು ಹುಡುಕುವ ಇಂತಹ ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳು ಕಾನೂನಿನ ಆಡಳಿತ ಮತ್ತು ತಾರ್ಕಿಕ ಚಿಂತನೆಯನ್ನು ಮೆಟ್ಟಿ ನಿಲ್ಲಲು ಎಂದಿಗೂ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಎಚ್ಚರಿಸಿದೆ.

ಒಡಿಶಾದ ಮಹಿಳೆಯೊಬ್ಬರ ಮೇಲೆ ಮಾಟಮಂತ್ರದ ಆರೋಪ ಹೊರಿಸಿ ಅವರನ್ನು ಹತ್ಯೆ ಮಾಡಿದ್ದ ಬಾಲ್ಕು ಓರಾಮ್ ಎಂಬ ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯುವ ವೇಳೆ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 1998 ರಲ್ಲಿ ನಡೆದಿದ್ದ ಈ ಭೀಕರ ಕೊಲೆ ಪ್ರಕರಣದಲ್ಲಿ ಒಡಿಶಾ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಅಪೀಲುದಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ.

ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಇಂದಿಗೂ ಇಂತಹ ಅಮಾನವೀಯ ಆಚರಣೆಗಳು ಜೀವಂತವಾಗಿರುವುದು ನ್ಯಾಯಾಲಯದ ಮನಸ್ಸಿಗೆ ತೀವ್ರ ತಾಪತ್ರಯ ಹಾಗೂ ತಂಟೆಯನ್ನುುಂಟುಮಾಡಿದೆ ಎಂದು ಪೀಠ ವಿಷಾದಿಸಿದೆ. ಸಮಾಜವು ಭಯ, ದುಃಖ ಅಥವಾ ಯಾವುದಾದರೂ ಅನಿರೀಕ್ಷಿತ ಘಟನೆಯನ್ನು ಎದುರಿಸಿದಾಗ, ಅದರ ನೈಜ ಕಾರಣವನ್ನು ಹುಡುಕುವ ಬದಲು ಅತ್ಯಂತ ಸುಲಭವಾಗಿ ಮಹಿಳೆಯೊಬ್ಬಳ ಮೇಲೆ ಗೂಬೆಕೂರಿಸಲು ಯತ್ನಿಸುತ್ತದೆ. ಇಂತಹ ಮೂಢನಂಬಿಕೆಗಳನ್ನು ತೊರೆದು, ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರಿಯಾಗಿಸುವುದನ್ನು ತಡೆಯಲು ಪ್ರತಿಯೊಬ್ಬರಲ್ಲೂ ವೈಚಾರಿಕತೆ ಬೆಳೆಯಬೇಕು ಎಂದು ಉನ್ನತ ನ್ಯಾಯಾಲಯ ಪ್ರತಿಪಾದಿಸಿದೆ.

Star Of Kudla

Learn More →

Leave a Reply

Your email address will not be published. Required fields are marked *