ಗುಟ್ಕಾ, ಪಾನ್ ಮಸಾಲಾ ನಿಷೇಧ ವಾಪಸ್ ಪಡೆಯಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ-ಮಾರಾಟ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ವಾಪಸ್ ಪಡೆಯುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.

ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ, ತಮ್ಮ ಗಮನಕ್ಕೆ ತರದೇ ಇಂತಹ ಗಂಭೀರ ಆದೇಶವನ್ನು ಹೇಗೆ ಹೊರಡಿಸಲಾಗಿದೆ? ಸುಮಾರು ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಈ ನಿರ್ಧಾರ ಪರಿಣಾಮ ಬೀರುತ್ತದೆ. ಹೀಗಾಗಿ, ಗುಟ್ಕಾ ನಿಷೇಧ ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯುವಂತೆ ಅವರು ಸೂಚನೆ ನೀಡಿದ್ದಾರೆ.

ಗುಟ್ಕಾ ನಿಷೇಧ ಆದೇಶದ ಕುರಿತು ಬಹುತೇಕ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಚರ್ಚಿಸಲು ಹಿರಿಯ ಶಾಸಕರು ಗುರುವಾರ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ಗುಟ್ಕಾ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಅವರು ತಿಳಿಸಿದ್ದಾರೆ. ಇನ್ನು ಈ ಆದೇಶ ಇಂದೋ ಅಥವಾ ನಾಳೆಯೋ ಹೊರಬೀಳುವ ಸಾಧ್ಯತೆಯಿದೆ.

ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಅಧಿಕೃತ ಅಧಿಸೂಚನೆ ಹೊರಡಿಸಿದ್ದರು. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಬುಧವಾರ ಈ ಆದೇಶ ಹೊರಡಿಸಿತ್ತು. ಇನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ನಿಷೇಧ ಜಾರಿಗೆ ಬಂದಿತ್ತು.

Star Of Kudla

Learn More →

Leave a Reply

Your email address will not be published. Required fields are marked *