ಕಡಬ: ರಾಮಕುಂಜ ಗ್ರಾಮದ ಆತೂರಿನಲ್ಲಿ ಮನೆಯಲ್ಲಿದ್ದ ಫ್ರಿಡ್ಜ್ ಏಕಾಏಕಿ ಭೀಕರವಾಗಿ ಸ್ಫೋಟಗೊಂಡು ಮನೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾದ ಘಟನೆ ಆಗಸ್ಟ್ 11ರ ಮಂಗಳವಾರ ಸಂಜೆ ಸಂಭವಿಸಿದೆ.
ಆತೂರು ನಿವಾಸಿ, ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬವರ ಮನೆಯಲ್ಲಿ ಈ ದುರಂತ ನಡೆದಿದೆ.


ಆಗಸ್ಟ್ 11ರ ಸಂಜೆಯ ವೇಳೆಗೆ ಮನೆಯಲ್ಲಿದ್ದ ಫ್ರಿಡ್ಜ್ನಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು. ಮೇಲ್ದಾವಣಿ ಹಾಗೂ ಪೀಠೋಪಕರಣಗಳಿಗೆ ತೀವ್ರ ಹಾನಿಯಾಗಿದೆ.
ಅಲ್ಲದೆ, ಸ್ಫೋಟದ ಬೆನ್ನಲ್ಲೇ ಬೆಂಕಿ ವ್ಯಾಪಿಸಿದ್ದರಿಂದ ಮನೆಯಲ್ಲಿದ್ದ ಇತರ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ಅವರ ಪತ್ನಿ ಆರೀಫಾ ಮಾತ್ರ ಇದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಯುವಕರಾದ ಅಝೀಝ್ ಹಳ್ಯಾರ, ಅಝೀಝ್ ಪಲ್ತಾಡಿ, ಸಿಹಾಬ್ ಗೋಳಿತ್ತಾಡಿ, ಲತೀಫ್ ನೆಲ್ಯಾಟ್ಟು, ಅನ್ಸಾರ್ ಕುಟೇಲ್ ನೀರಾಜೆ, ಜನಾರ್ದನ ರಾಮಕುಂಜ, ಅಶ್ರಫ್ ಪಟ್ಟೆ, ಖಾದರ್ ಬಿಜತಲಿ, ಫಾರೂಕ್ ಎಲ್ಯoಗ, ಶಂಶಿರ್ ಗೋಳಿತ್ತಾಡಿ, ಫಾರೂಕ್ ಅಮೈ, ನಿಝರ್ ಮೊಟ್ಟೆತಡ್ಕ ಹಾಗೂ ರಝಕ್ ಬೂಮಿಕ ಬಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.


