ಛತ್ತೀಸ್ಗಢದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರವೂ ನಕಲಿ (ಕೃತಕ/ನಾನ್ ಡೈರಿ) ಪನ್ನೀರ್ ಉತ್ಪಾದನೆ, ಸಂಸ್ಕರಣೆ, ಸಾಗಾಣಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ. ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರು ಈ ಕಠಿಣ ನಿರ್ಧಾರ ತಳೆದಿದ್ದು, ತಯಾರಿಕೆಯಿಂದ ಹಿಡಿದು ರಿಟೇಲ್ ಮಾರಾಟ ಮತ್ತು ಹೋಟೆಲ್, ರೆಸ್ಟೋರೆಂಟ್ಗಳವರೆಗೆ ಎಲ್ಲಿಯೂ ಕೃತಕ ಪನ್ನೀರ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆಸಿದ ತಪಾಸಣೆ ವೇಳೆ ಸಂಗ್ರಹಿಸಲಾಗಿದ್ದ 109ಕ್ಕೂ ಹೆಚ್ಚು ಪನ್ನೀರ್ ಮಾದರಿಗಳು ಕಳಪೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡುವ ಕಳಪೆ ಗುಣಮಟ್ಟದ ಎಣ್ಣೆ ಹಾಗೂ ಡಾಲ್ಡಾ ಬಳಸಿ ಸಿದ್ಧಪಡಿಸುವ ನಕಲಿ ಪನ್ನೀರ್ ದಂಧೆಗೆ ಬ್ರೇಕ್ ಹಾಕಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸಿ ನಕಲಿ ಪನ್ನೀರ್ ಮಾರಾಟ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಈ ಅಸುರಕ್ಷಿತ ಪನ್ನೀರ್ ಸೇವನೆಯಿಂದ ಸಾವು ಸಂಭವಿಸಿದರೆ, ಸಂಬಂಧಪಟ್ಟ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸುವಷ್ಟು ಕಠಿಣ ಕಾಯ್ದೆ ರೂಪಿಸಲಾಗಿದೆ.
ಸಾರ್ವಜನಿಕರ ಹಾಗೂ ಗ್ರಾಹಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕೇವಲ ಶುದ್ಧ ಹಾಲಿನಿಂದ ತಯಾರಿಸಿದ ನಿಜವಾದ ಪನ್ನೀರ್ಗೆ ಮಾತ್ರವೇ ಮಾರುಕಟ್ಟೆಯಲ್ಲಿ ಅವಕಾಶ ನೀಡಲಾಗಿದೆ. ನಕಲಿ ಪನ್ನೀರ್ ಮಾತ್ರವಲ್ಲದೆ, ಕೃತಕ ಹಾಲಿನ ಅಕ್ರಮ ಜಾಲದ ಮೇಲೂ ಎಫ್ಡಿಎ ಅಧಿಕಾರಿಗಳು ನಿರಂತರ ದಾಳಿ ಮುಂದುವರಿಸಿದ್ದಾರೆ. ಪನ್ನೀರ್ ಶೇಖರಣೆ ಅಥವಾ ಸಾಗಾಟ ಮಾಡುವವರ ವಿರುದ್ಧವೂ ಕಟ್ಟುನಿಟ್ಟಿನ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.


