ಪ್ರಚೋದನಾಕಾರಿ ಭಾಷಣ ಪ್ರಕರಣ ಸಾಬೀತಾದ ಹಿನ್ನೆಲೆ: “ತಾಂಟ್ರೆ ಬಾ ತಾಂಟ್” ಖ್ಯಾತಿಯ ರಿಯಾಜ್ ಫರಂಗಿಪೇಟೆಗೆ 6 ತಿಂಗಳು ಜೈಲು, ₹10 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!

ಬೆಳ್ತಂಗಡಿ : ಪ್ರತಿಭಟನಾ ಸಭೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಎಂಬಾತನಿಗೆ ಮಾನ್ಯ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ದಿನಾಂಕ 23-07-2015 ರಂದು ಬೆಳ್ತಂಗಡಿ ತಾಲೂಕು ಕಚೇರಿ ಬಳಿ ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಬೆಳ್ತಂಗಡಿ ವಲಯ ಸಂಘಟನೆಯ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಹಮ್ಮದ್ ರಿಯಾಜ್ ಫರಂಗಿಪೇಟೆ ಎಂಬಾತ ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಉದ್ರೇಕಕಾರಿ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 315/2015 ರಂತೆ, ಭಾರತೀಯ ದಂಡ ಸಂಹಿತೆ (IPC) ಕಲಂ 153(A) ಮತ್ತು 295(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಂದಿನ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ತನಿಖಾಧಿಕಾರಿಯಾಗಿದ್ದ ರವಿ ಬಿ.ಎಸ್. ಅವರು ಪ್ರಕರಣದ ಕಂಪ್ಲೀಟ್ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge Sheet) ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು, ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು, IPC ಕಲಂ 153(A) ಅಡಿಯಲ್ಲಿ ಆರೋಪಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಆಶೀತಾ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

Star Of Kudla

Learn More →

Leave a Reply

Your email address will not be published. Required fields are marked *