

ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ನಾ ಲಾಡ್‌ಪ್ರಾ ಪ್ರದೇಶದಲ್ಲಿರುವ ಪಬ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 27 ಮಂದಿ ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾರ್ಟಿಯಲ್ಲಿ ಸಂಗೀತಕ್ಕೆ ಕುಣಿದು ಸಂಭ್ರಮಿಸುತ್ತಿದ್ದ ಕ್ಷಣಗಳಲ್ಲೇ ಈ ದುರಂತ ಸಂಭವಿಸಿದ್ದು, ಕ್ಷಣಾರ್ಧದಲ್ಲೇ ಸಂತಸದ ವಾತಾವರಣ ಶೋಕಸಾಗರವಾಗಿ ಮಾರ್ಪಟ್ಟಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇದಿಕೆಯ ಸಮೀಪದಲ್ಲಿದ್ದ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಬಳಿಕ ಸ್ಫೋಟದಂತಹ ಭಾರೀ ಶಬ್ದ ಕೇಳಿಸಿಕೊಂಡಿದೆ. ತಕ್ಷಣವೇ ಪಬ್‌ನೊಳಗೆ ದಟ್ಟ ಕಪ್ಪು ಹೊಗೆ ಆವರಿಸಿದ್ದರಿಂದ ಜನರು ಒಬ್ಬರನ್ನೊಬ್ಬರು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಆತಂಕಗೊಂಡವರು ಹೊರಗೆ ಓಡಲು ಯತ್ನಿಸಿದರೂ, ಕತ್ತಲೆ ಮತ್ತು ಹೊಗೆಯಿಂದ ಅನೇಕರು ದಾರಿ ತಪ್ಪಿ ಸಿಕ್ಕಿಹಾಕಿಕೊಂಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಸುಮಾರು ಅರ್ಧ ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಆದರೆ ಆಗಾಗಲೇ ಭಾರೀ ಪ್ರಮಾಣದ ಜೀವಹಾನಿ ಸಂಭವಿಸಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತದೇಹಗಳ ಬಹುಪಾಲು ಪಬ್‌ನ ಹಿಂಭಾಗದ ಶೌಚಾಲಯದ ಸಮೀಪ ಪತ್ತೆಯಾಗಿವೆ. ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಹಲವರು ಆ ಭಾಗಕ್ಕೆ ಓಡಿದ್ದರೂ, ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತವು ಪಬ್‌ನ ತುರ್ತು ನಿರ್ಗಮನ ದ್ವಾರಗಳು, ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಹಾಗೂ ತುರ್ತು ಪರಿಸ್ಥಿತಿ ನಿರ್ವಹಣಾ ಕ್ರಮಗಳು ಸಮರ್ಪಕವಾಗಿದ್ದವೆಯೇ ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬ ಅಂಶವನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಘಟನೆ ಥೈಲ್ಯಾಂಡ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಮತ್ತೆ ಒತ್ತಿ ಹೇಳಿದೆ.


