
ದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಮತ್ತೆ ಹದಗೆಟ್ಟಿದೆ. ಇಂದು ಬೆಳಿಗ್ಗೆ ಗಾಳಿಯ ಗುಣಮಟ್ಟವು ಕಳಪೆ ಮತ್ತು ಅತಿ ಕಳಪೆ ಮಟ್ಟದಲ್ಲಿತ್ತು. ಇದರಿಂದ, ಬೆಳಗಿನ ವಾಯುವಿಹಾರ ಮತ್ತು ದೈಹಿಕ ಚಟುವಟಿಕೆಯನ್ನು ತಪ್ಪಿಸಲು ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೊರಡಿಸಿದ ಗಾಳಿಯ ಗುಣಮಟ್ಟದ ಬುಲೆಟಿನ್ ಪ್ರಕಾರ, ಗುರುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟವು ಕಳಪೆ (ಎಕ್ಯೂಐ 278) ವರ್ಗದಲ್ಲಿತ್ತು.
ವಾಯು ಗುಣಮಟ್ಟ ನಿರ್ವಹಣಾ ಆಯೋಗದ ನೀಡಿದ ಮಾಹಿತಿಯ ಪ್ರಕಾರ, ಬೆಳಿಗ್ಗೆ 9 ಗಂಟೆಗೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತಮುತ್ತಲು ವಾಯು ಗುಣಮಟ್ಟ ಸೂಚ್ಯಂಕ (AQI) 304 ದಾಖಲಾಗಿತ್ತು. ಇದು ಅತಿ ಕಳಪೆಯಾಗಿದೆ. ಓಖ್ಲಾ ನಿಲ್ದಾಣದಲ್ಲಿ 263 ಎಕ್ಯೂಐ ಇದ್ದರೆ, ಚಾಂದನಿ ಚೌಕ್‌ನಲ್ಲಿ 307, ಬವಾನಾ ನಿಲ್ದಾಣದಲ್ಲಿ ಅತ್ಯಂತ ಕಳಪೆ ಅಂದರೆ 344 ಎಕ್ಯೂಐ ದಾಖಲಾಗಿತ್ತು.
ದೆಹಲಿಯ ಹೊರಭಾಗದಲ್ಲಿರುವ ನಗರಗಳಾದ ನೋಯ್ಡಾ ಮತ್ತು ಗುರುಗ್ರಾಮ್‌ಗಳಲ್ಲಿ ಎಕ್ಯೂಐ 500 ಕ್ಕಿಂತ ಹೆಚ್ಚಿತ್ತು. ಇದು ತೀವ್ರ ಕಳಪೆ ವರ್ಗಕ್ಕೆ ಸೇರಿದೆ. ನೋಯ್ಡಾದಲ್ಲಿ ಬೆಳಿಗ್ಗೆ 7 ಗಂಟೆಗೆ ಎಕ್ಯೂಐ 503 ದಾಖಲಾಗಿದ್ದರೆ, ಗುರುಗ್ರಾಮ್‌ನಲ್ಲಿ 515 ಎಕ್ಯೂಐ ಇತ್ತು.
ನಗರದಲ್ಲಿ ಕನಿಷ್ಠ ತಾಪಮಾನ 12.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿ, ಸರಾಸರಿಗಿಂತ 2.6 ಡಿಗ್ರಿ ಇಳಿದಿದೆ. ಇದು ಹೀಗೆಯೇ ಮುಂದುವರಿಯಲಿದೆ ಎಂದು ವಾಯು ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮುನ್ಸೂಚನೆ ನೀಡಿದೆ. ನವೆಂಬರ್ 6 ಮತ್ತು 8 ರ ನಡುವೆ ಮಾಲಿನ್ಯದ ಮಟ್ಟವು ಅತ್ಯಂತ ಕಳಪೆ ಇರುವ ಸಾಧ್ಯತೆಯಿದೆ.


