ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ

ಉಡುಪಿ: ಭೂಗತ ಲೋಕದಲ್ಲಿ ಕುಖ್ಯಾತಿ ಪಡೆದಿರುವ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸ್ವಗ್ರಾಮಕ್ಕೆ ತೆರಳಲು ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಐದು ಮಕ್ಕಳನ್ನು ಅಗಲಿರುವ ಸುಶೀಲಾ ಪೂಜಾರ್ತಿ ಅವರು ಇಬ್ಬರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಹೊಂದಿದ್ದರು. ಅವರಲ್ಲಿ ರವಿ ಪೂಜಾರಿ ಒಬ್ಬರು. ಮಲ್ಪೆಯ ನೆರ್ಗಿಯಲ್ಲಿರುವ ಕುಟುಂಬದ ಹಿರಿಯರ ಮನೆಯಲ್ಲಿ ನವೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ

ನ್ಯಾಯಾಲಯದ ಆದೇಶದಂತೆ ರವಿ ಪೂಜಾರಿಯನ್ನು ಶುಕ್ರವಾರ ಮಧ್ಯಾಹ್ನ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೆಂಗಳೂರಿನಿಂದ ಉಡುಪಿಗೆ ಕರೆತರಲಾಗುತ್ತದೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ಅವರನ್ನು ಮತ್ತೆ ಪೊಲೀಸ್ ಎಸ್ಕಾರ್ಟ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ರವಿ ಪೂಜಾರಿಯ ಪ್ರಯಾಣಕ್ಕೆ ಅಗತ್ಯವಿರುವ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸುವಂತೆ ಬೆಂಗಳೂರಿನ ಆಡುಗೋಡಿಯ ಸಿಟಿ ಆರ್ಮ್ಡ್ ರಿಸರ್ವ್ (ದಕ್ಷಿಣ) ವಿಭಾಗದ ಡಿಸಿಪಿ ಹಾಗೂ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

ಜೈಲು ಇಲಾಖೆಯ ವತಿಯಿಂದ ಪ್ರಯಾಣದ ವೇಳೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಉಡುಪಿ ಜಿಲ್ಲಾ ಪೊಲೀಸರೂ ಸ್ಥಳೀಯ ಮಟ್ಟದಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ. ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿದೆ.

ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದ ಅನುಮತಿಯ ಮೇರೆಗೆ ಹಲವು ವರ್ಷಗಳ ಬಳಿಕ ರವಿ ಪೂಜಾರಿ ಸ್ವಗ್ರಾಮಕ್ಕೆ ಆಗಮಿಸುತ್ತಿರುವುದು ಗಮನ ಸೆಳೆದಿದೆ.

Star Of Kudla

Learn More →

Leave a Reply

Your email address will not be published. Required fields are marked *