ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವಾದ ಮುಡಾ ವ್ಯಾಪ್ತಿಯ ಸಾರ್ವಜನಿಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸಿಹಿಸುದ್ದಿ ಲಭಿಸಿದೆ. ನಿವೇಶನ ಖರೀದಿ, ಬಡಾವಣೆ ಅಭಿವೃದ್ಧಿ ಹಾಗೂ ಮನೆ ನಿರ್ಮಾಣದ ಸಂದರ್ಭದಲ್ಲಿ ಎದುರಾಗುತ್ತಿದ್ದ ಕಾನೂನು ಅಡೆತಡೆಗಳು ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿವರ್ತನೆ ಕಡ್ಡಾಯ ಆದೇಶವನ್ನು ತೆಗೆದುಹಾಕಿರುವುದರ ಜೊತೆಗೆ, ಅನಧಿಕೃತ ನಿವೇಶನಗಳ ಸಕ್ರಮ ಶುಲ್ಕವನ್ನು ಶೇ.15ರಿಂದ ಶೇ.1ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.
ಭೂ ಪರಿವರ್ತನೆಗೆ ಇನ್ಮುಂದೆ ಪ್ರತ್ಯೇಕ ಆದೇಶದ ಅಗತ್ಯವಿಲ್ಲ!
ಮುಡಾದ ಅನುಮೋದಿತ ಮಹಾಯೋಜನೆ ವ್ಯಾಪ್ತಿಯ ಜಮೀನುಗಳಿಗೆ ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ ಕಚೇರಿಯಿಂದ ಪ್ರತ್ಯೇಕ ಭೂ ಪರಿವರ್ತನಾ ಆದೇಶ ಪಡೆಯುವ ಕಡ್ಡಾಯವನ್ನು ತೆಗೆದುಹಾಕಲಾಗಿದೆ. ಮಹಾಯೋಜನೆಯ ವಲಯ ನಿಯಮಗಳಿಗೆ ಅನುಗುಣವಾಗಿ ಮುಡಾದಿಂದಲೇ ಏಕನಿವೇಶನ ಅಥವಾ ವಿನ್ಯಾಸ ಅನುಮೋದನೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರ ಕಚೇರಿ ಅಲೆದಾಟ ಮತ್ತು ಅನಗತ್ಯ ವಿಳಂಬ ಕಡಿಮೆಯಾಗುವ ನಿರೀಕ್ಷೆಯಿದೆ.
ಸಕ್ರಮ ಶುಲ್ಕ ಶೇ.15ರಿಂದ ಕೇವಲ ಶೇ.1ಕ್ಕೆ!
ಅನಧಿಕೃತವಾಗಿ ವಿಭಜನೆಯಾದ ಜಮೀನುಗಳ ಸಕ್ರಮ ಶುಲ್ಕವನ್ನು ಗಣನೀಯವಾಗಿ ಇಳಿಸಲಾಗಿದೆ. 2011ರ ಮಾರ್ಚ್ 26ಕ್ಕಿಂತ ಮೊದಲು ನೋಂದಣಿಯಾದ ಜಮೀನುಗಳಿಗೂ, ನಂತರ ನೋಂದಣಿಯಾದ ಕೆಲವು ಪ್ರಕರಣಗಳಿಗೂ ಶೇ.1ರಷ್ಟು ಶುಲ್ಕ ಪಾವತಿಸಿ ವಿನ್ಯಾಸ ಅನುಮೋದನೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ನಿರ್ಧಾರದಿಂದ ನಿವೇಶನ ಖರೀದಿಸಿ ಸಕ್ರಮೀಕರಣಕ್ಕಾಗಿ ಕಾಯುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಜೊತೆಗೆ, ನಿಯಮಾನುಸಾರ ಅನುಮೋದನೆ ಪಡೆದ ಆಸ್ತಿಗಳಿಗೆ ಕಾನೂನುಬದ್ಧ ಭದ್ರತೆ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಪಡೆಯುವ ಪ್ರಕ್ರಿಯೆಯೂ ಸುಗಮವಾಗಬಹುದು.
ಸರ್ವೆ ನಕ್ಷೆ ಸಮಸ್ಯೆಗೂ ಪರಿಹಾರದ ಭರವಸೆ!
ನಿವೇಶನ ಮಂಜೂರಾತಿಗೆ ಅಗತ್ಯವಿರುವ ಸರ್ವೆ ನಕ್ಷೆ ಪಡೆಯುವಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಲು ಹೊಸ ಕಾರ್ಯವಿಧಾನ ಜಾರಿಗೆ ತರಲಾಗಿದೆ. ನಗರ ಪ್ರದೇಶಗಳಲ್ಲಿ ಯು.ಪಿ.ಆರ್.ಒ ವಿಭಾಗದ ಮೂಲಕ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭೂದಾಖಲೆಗಳ ಇಲಾಖೆಯ ಎಡಿಎಲ್ಆರ್ ಕಚೇರಿಗಳ ಸಹಯೋಗದೊಂದಿಗೆ ಕಾಲಮಿತಿಯಲ್ಲಿ ನಕ್ಷೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ!
ರಾಜ್ಯ ಸರ್ಕಾರದ ಈ ಜನಸ್ನೇಹಿ ನಿರ್ಧಾರಗಳ ಸದುಪಯೋಗವನ್ನು ಮುಡಾ ವ್ಯಾಪ್ತಿಯ ನಾಗರಿಕರು ಪಡೆದುಕೊಳ್ಳಬೇಕು. ಸಕ್ರಮ ವಿನ್ಯಾಸ ಅನುಮೋದನೆ ಪಡೆಯಲು ಅರ್ಹರಾಗಿರುವವರು ಅಗತ್ಯ ದಾಖಲೆಗಳೊಂದಿಗೆ ಮುಡಾ ಕಚೇರಿಯನ್ನು ಸಂಪರ್ಕಿಸುವಂತೆ ಸಂತೋಷ್ ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಡಾ ಆಯುಕ್ತ ಮೊಹಮ್ಮದ್ ನಝೀರ್ ಹಾಗೂ ಸದಸ್ಯರಾದ ನೀರಜ್ ಪಾಲ್, ಸಬಿತಾ ಮಿಸ್ಕಿತ್ ಮತ್ತು ಸುಮನ್ ಉಪಸ್ಥಿತರಿದ್ದರು.


