ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಖೈದಿಗಳು ನಿಷೇಧಿತ ಮೊಬೈಲ್ ಫೋನ್ಗಳನ್ನು ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ, ಮಂಗಳೂರು ನಗರ ಪೊಲೀಸರು ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿ 10 ಸ್ಮಾರ್ಟ್ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರಾಗೃಹದ ಎ-ಬ್ಲಾಕ್ನಲ್ಲಿ ಪೊಲೀಸರು ನಡೆಸಿದ ತೀವ್ರ ತಪಾಸಣೆ ವೇಳೆ ಒಟ್ಟು 9 ಜನ ಖೈದಿಗಳ ಬಳಿ ಈ ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಮೊಬೈಲ್ ಜಪ್ತಿಯಾದ ಖೈದಿಗಳ ಪೈಕಿ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಾಕ್ ಅಲಿಯಾಸ್ ಜುಟ್ಟು ಅಸ್ಫಾಕ್ ಮತ್ತು ಅರ್ಷದ್ ಇತ್ತೀಚೆಗೆ ತೊಕ್ಕೊಟ್ಟು ಬಳಿ ನಡೆದಿದ್ದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಉಳಿದಂತೆ ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಹಾಗೂ ಅಬ್ದುಲ್ ಸಾದಿಕ್ ಎನ್ಡಿಪಿಎಸ್ ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿಗಳಾಗಿದ್ದರೆ, ಅರ್ಫಾಝ್ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ಕೋಕಾ ಪ್ರಕರಣದ ಆರೋಪಿಯಾಗಿದ್ದಾನೆ.
ಕಾರಾಗೃಹದೊಳಗೆ ಈ ಸ್ಮಾರ್ಟ್ಫೋನ್ಗಳು ಹೇಗೆ ಪೂರೈಕೆಯಾದವು ಮತ್ತು ಖೈದಿಗಳು ಇವುಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದರು ಎಂಬುದರ ಕುರಿತು ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಸಮಗ್ರ ತನಿಖೆ ಮುಂದುವರಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


